ನಗರದ ಈರುಳ್ಳಿ ಮಾರ್ಕೆಟ್ ಬಳಿಯ ಎಪಿಎಂಸಿ ಮೇಲ್ಸೇತುವೆ ಕೆಳಗಡೆ ಅವ್ಯವಸ್ಥೆಯ ಆಗರವಾಗಿದ್ದು, ವಾಹನಗಳು ಹಾಗೂ ಜನರ ಓಡಾಟಕ್ಕೆ ತುಂಬಾ ತೊಂದರೆ ಆಗಿದೆ. ರಸ್ತೆ ಮಧ್ಯೆ ನೀರು ಹರಿಯುತ್ತಿದ್ದರೆ ಕಬ್ಬಿಣದ ರಾಡುಗಳು ತುಕ್ಕು ಹಿಡಿದು ಹಾಳಾಗಿವೆ. ಪ್ರಾಣ ಕೈಯಲ್ಲಿಡಿದು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.
ರಸ್ತೆಯ ಇಕ್ಕೆಲಗಳಲ್ಲಿ ಕಬ್ಬಿಣದ ರಾಡುಗಳ ಜಾಲರಿ ಅಳವಡಿಕೆ ಮಾಡಲಾಗಿದ್ದು, ಮುರಿದು ಬಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಈಗಾಗಲೇ ವಾಹನ ಸವಾರರು ಬಿದ್ದು ಗಾಯಗೊಂಡ ಪ್ರಕರಣಗಳು ನಡೆಯುತ್ತಲೇ ಇವೆ. ಮಹಾನಗರ ಪಾಲಿಕೆಯ ಆಡಳಿತ ವರ್ಗ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರು ಕೆಂಡಾಮಂಡಲರಾಗಿದ್ದಾರೆ.
ರಸ್ತೆ ಮಧ್ಯದಲ್ಲಿ ಕಲ್ಲು ನೆಟ್ಟಿದ್ದು, ಇಲ್ಲಿ ಕಾಲಿಟ್ಟರೆ ಸಾಕು ಒಳಗೆ ಹೋಗುತ್ತದೆ. ಇನ್ನು ನೀರು ಹರಿದು ಹೋಗಲು ಅಳವಡಿಸಿರುವ ಪೈಪ್ ಗಳಲ್ಲಿ ತ್ಯಾಜ್ಯ ತುಂಬಿಕೊಂಡಿದ್ದು, ನೀರು ಹೊರ ಹೋಗುತ್ತಿಲ್ಲ. ಮಳೆ ಬಂದರೆ ಇಲ್ಲಿ ಓಡಾಡಲು ಆಗಲ್ಲ. ಶೇಖರಪ್ಪ ನಗರದ ವಾಸಿಗಳು ಹಾಗೂ ವ್ಯಾಪಾರಸ್ಥರು ಪಡುತ್ತಿರುವ ಪಾಡು ಅಷ್ಟಿಷ್ಟಲ್ಲ. ಲಾರಿ, ಬಸ್, ಆಂಬುಲೆನ್ಸ್ ವಾಹನಗಳು ಈ ಗುಂಡಿಯಲ್ಲಿ ಸಿಲುಕಿದ ಘಟನೆಗಳೂ ನಡೆದಿವೆ.
ಸಂಬಂಧಪಟ್ಟವರ ಗಮನಕ್ಕೆ ತಂದರೆ ಕೇವಲ ತೇಪೆ ಹಾಕುವ ಕೆಲಸ ಮಾಡಲಾಗುತ್ತಿದೆ. ಸೇತುವೆ ಕೆಳಭಾಗದಲ್ಲಿ ಮೂರು ಕಡೆಗಳಲ್ಲಿ ಕಬ್ಬಿಣದ ಜಾಲರಿ ಹಾಕಿದ್ದು, ಮೂರು ಕಡೆಗಳಲ್ಲಿಯೂ ದೊಡ್ಡದಾದ ಗುಂಡಿ ಬಿದ್ದಿದೆ. ಮಳೆ ಬಂದಾಗ ಇಲ್ಲಿ ನೀರು ಉಕ್ಕಿ ಹರಿಯುವುದರಿಂದ ನಡೆದಾಡಲು ಆಗದು. ಇನ್ನು ವಿದ್ಯುತ್ ದೀಪ ಇಲ್ಲ. ಇದರಿಂದಾಗಿ ರಾತ್ರಿ ವೇಳೆ ಕಳ್ಳರ ಭಯ ಇದೆ. ಪೂರ್ತಿ ಕತ್ತಲಾಗಿರುವ ಕಾರಣ ಜನರು ಭಯದಲ್ಲೇ ಮನೆಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
PublicNext
19/07/2022 05:48 pm