ತುಮಕೂರು: ಇತ್ತಿಚೆಗಷ್ಟೇ ಥೇಟ್ ಕನ್ನಡದ ದಿಗ್ಗಜರು ಸಿನಿಮಾದಂತೆ ತುಮಕೂರಿನ ಕಾರ್ ಶೋ ರೂಮ್ ಒಂದರಲ್ಲಿ ರೈತನೋರ್ವನನ್ನು ಶೋ ರೂಮ್ ನವರು ಅವಮಾನ ಮಾಡಿರುವುದು ಭಾರಿ ಮುನ್ನಲೆಗೆ ಬಂದಿತ್ತು.
ತುಮಕೂರು ತಾಲೂಕಿನ ಹೆಬ್ಬೂರು ಹೋಬಳಿಯ ರಾಮನ ಪಾಳ್ಯದ ಕೆಂಪೇಗೌಡ ಮತ್ತು ಸ್ನೇಹಿತರು ಮಹೀಂದ್ರಾ ಶೋ ರೂಮ್ ಗೆ ಹೋಗಿದ್ದ ವೇಳೆ ಶೋ ರೂಮ್ ನವರು ಇವರ ಭಾಷೆ ಮತ್ತು ಶೈಲಿ ನೋಡಿ ಶೋ ರೂಮ್ ನವರು ದರ್ಪ ತೋರಿದ್ದರು.
ದುಡ್ಡು ತೆಗೆದುಕೊಂಡು ಬಂದು ಕಾರ್ ನೋಡಿ ಎಂದು ಅವಮಾನ ಮಾಡಿದ್ದರು. ಇದರಿಂದ ಕಂಗಾಲಾದ ರೈತ ಕೇವಲ ಅರ್ಧ ಗಂಟೆಯಲ್ಲಿ 10 ಲಕ್ಷ ಕ್ಯಾಶ್ ಜೊತೆಗೆ ಶೋ ರೂಮ್ ಗೆ ಎಂಟ್ರಿ ಕೊಟ್ಟು ಅನ್ನದಾತನನ್ನು ಅಲ್ಲಗಳೆಯದಂತೆ ಎಚ್ಚರಿಕೆ ಕೊಟ್ಟಿದ್ದ
10 ರೂಪಾಯಿ ಯೋಗ್ಯತೆ ಇಲ್ಲ. ಕಾರ್ ಖರೀದಿಗೆ ಬರ್ತೀರಾ ಎಂದಿದ್ದ ಶೋ ರೂಮ್ ನವರ ಮುಂದೆ ರೈತ 10 ಲಕ್ಷ ತಂದು ಇಟ್ಟ ರೈತನ ಬಗ್ಗೆ ಸ್ಟೋರಿ ಭಾರಿ ವೈರಲ್ ಆಗಿತ್ತು.
ಸದ್ಯ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಹೀಂದ್ರ ಕಂಪನಿ ಅಧ್ಯಕ್ಷ ಆನಂದ್ ಮಹೀಂದ್ರ ಮತ್ತು ಸಿಇಒ ವಿಜಯ್ ನಕ್ರಾ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ವಿಜಯ್ ನಕ್ರಾ ತಮ್ಮ ಟ್ವೀಟ್ನಲ್ಲಿ, "ಗ್ರಾಹಕರಿಗೆ ಅತ್ಯುತ್ತಮ ಅನುಭವ ಒದಗಿಸಬೇಕು ಎನ್ನುವ ನಮ್ಮ ಪ್ರಯತ್ನದಲ್ಲಿ ಡೀಲರ್ ಗಳ ಪಾತ್ರ ಅತಿ ಮುಖ್ಯ. ನಮ್ಮ ಗ್ರಾಹಕರನ್ನು ಗೌರವ ಮತ್ತು ಘನತೆಯಿಂದ ಕಾಣಬೇಕು ಎನ್ನುವುದು ನಮ್ಮ ನಿಯಮ. ಘಟನೆಯ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ. ಸೂಕ್ತ ಕ್ರಮ ಕೈಗೊಳ್ಳುತ್ತೇವೆ" ಎಂದು ಭರವಸೆ ನೀಡಿದ್ದಾರೆ.
ಇನ್ನು ಆನಂದ್ ಮಹೀಂದ್ರ ಟ್ವೀಟ್ ಮಾಡಿ, "ಮಹೀಂದ್ರ ಕಂಪನಿಯ ಮುಖ್ಯ ಉದ್ದೇಶವೇ ನಮ್ಮ ಸಮುದಾಯಗಳು ಮತ್ತು ಎಲ್ಲ ಸಹಭಾಗಿಗಳಿಗೆ ಶಕ್ತಿ ತುಂಬುವುದು. ವ್ಯಕ್ತಿಯ ಘನತೆ ಎತ್ತಿಹಿಡಿಯುವುದು ನಮ್ಮ ಸಂಸ್ಥೆಯ ಉದ್ದೇಶ. ಈ ಮೌಲ್ಯದೊಂದಿಗೆ ರಾಜಿ ಆಗುವುದು ಅಥವಾ ನಮ್ಮ ನೀತಿಗಳಿಂದ ದೂರ ಹೋಗುವ ಯಾವುದೇ ಬೆಳವಣಿಗೆಯನ್ನು ಅತ್ಯಂತ ಗಂಭೀರವಾಗಿ ಮತ್ತು ತುರ್ತಾಗಿ ಗಮನಿಸುತ್ತೇವೆ" ಎಂದು ಹೇಳಿದ್ದಾರೆ.
PublicNext
26/01/2022 04:38 pm