ಹೈದರಾಬಾದ್: ಆಸ್ತಿ ಪಡೆದ ಮೂವರು ಮಕ್ಕಳು ಮುಪ್ಪಿನ ಕಾಲದಲ್ಲಿ ಹೆತ್ತವರನ್ನ ಬೀದಿಪಾಲು ಮಾಡಿದ ಅಮಾನವೀಯ ಘಟನೆ ತೆಲಂಗಾಣದ ಕರೀಂನಗರದ ಗ್ರಾಮಾಂತರ ಚೆರ್ಲಬೂತ್ಕೂರು ಎಂಬ ಗ್ರಾಮದಲ್ಲಿ ಘಟನೆ ನಡೆದಿದೆ.
90 ವರ್ಷ ವಯಸ್ಸಿನ ಐಲಯ್ಯ ಮತ್ತು ರಾವಮ್ಮ ದಂಪತಿ ಇದೀಗ ಬೀದಿಗೆ ಬಿದ್ದಿದ್ದು, ಸರ್ಕಾರಿ ಕಟ್ಟಡವೊಂದರಲ್ಲಿ ಜೀವನ ನಡೆಸುವಂತಾಗಿದೆ. ಐಲಯ್ಯ ದಂಪತಿಗೆ ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರಿದ್ದಾರೆ. ಐಲಯ್ಯ ತಮ್ಮ ಹೆಸರಿನಲ್ಲಿದ್ದ ಆರು ಎಕರೆ ಜಮೀನನ್ನ ಮೂವರು ಪುತ್ರರಿಗೆ ಹಂಚಿಕೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ತಾವಿದ್ದ ಮನೆಯನ್ನು ಮೂರನೇ ಮಗನಿಗೆ ಮನೆ ಸಹ ಕೊಟ್ಟಿದ್ದಾರೆ. ಇದಾದ ಬಳಿಕ ಮಕ್ಕಳು ಐಲಯ್ಯ ದಂಪತಿಯನ್ನು ಬೀದಿಪಾಲು ಮಾಡಿದ್ದಾರೆ. ಹೀಗಾಗಿ ವೃದ್ಧ ದಂಪತಿ ಗ್ರಾಮದಲ್ಲಿ ಮನೆಯೊಂದನ್ನು ಬಾಡಿಗೆ ಪಡೆದು, ತಮಗೆ ಬರುತ್ತಿದ್ದ ವೃದ್ಧಾಪ್ಯ ವೇತನದಲ್ಲಿ ಜೀವನ ನಡೆಸಲು ಶುರು ಮಾಡಿದ್ದಾರೆ.
ವೃದ್ಧ ದಂಪತಿಯ ಸಂಕಷ್ಟವನ್ನು ಅರಿತ ಗ್ರಾಮದ ಕೆಲ ಮುಖಂಡರು, ಮೂವರು ಪುತ್ರರು ತಲಾ ನಾಲ್ಕು ತಿಂಗಳಿಗೆ ಒಬ್ಬರಂತೆ ಪೋಷಕರನ್ನು ನೋಡಿಕೊಳ್ಳುವಂತೆ ಸೂಚಿಸಿದ್ದರು. ಅದರಂತೆ ಆರಂಭದಲ್ಲಿ ಇಬ್ಬರು ಗಂಡು ಮಕ್ಕಳೊಂದಿಗೆ ತಿಂಗಳ ಕಾಲ ಕಳೆದಿದ್ದಾರೆ. ಈ ವೇಳೆ, ಮೂರನೇ ಮಗ ತಂದೆ-ತಾಯಿಯನ್ನ ಕರೆದುಕೊಂಡು ಹೋಗಿಲ್ಲ. ಹೀಗಾಗಿ ಹಿರಿಯ ಮಗ ಅವರ ಸಾಮಗ್ರಿಗಳನ್ನ ಮನೆಯಿಂದ ಹೊರಗೆ ಎಸೆದಿದ್ದಾನೆ. ಬೇರೆ ದಾರಿ ಇಲ್ಲದೇ ವೃದ್ಧ ದಂಪತಿ ಕಳೆದ 20 ದಿನಗಳಿಂದ ಸರ್ಕಾರಿ ಕಟ್ಟಡವೊಂದರಲ್ಲಿ ವಾಸ ಮಾಡಲು ಶುರು ಮಾಡಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ವೃದ್ಧ ಪೋಷಕರ ಹೆಣ್ಣು ಮಕ್ಕಳು ಜಿಲ್ಲಾಧಿಕಾರಿ ಕಚೇರಿಯಲ್ಲಿ ದೂರು ದಾಖಲು ಮಾಡಿದ್ದಾರೆ. ಈ ಪ್ರಕರಣ ಸಚಿವ ಗಂಗೂಲ ಕಮಲಾಕರ್ ಅವರ ಗಮನಕ್ಕೆ ಬರುತ್ತಿದ್ದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ಗೆ ಸೂಚನೆ ನೀಡಿದ್ದಾರೆ.
PublicNext
17/05/2022 06:18 pm