ಪುಣೆ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ, ಸಮಾಜ ಸೇವಕಿ, ಸಿಂಧುತಾಯಿ ಸಪ್ಕಾಲ್ ಹೃದಯಾಘಾತದಿಂದ ಪುಣೆಯಲ್ಲಿ ಜ.4 ರಂದು ನಿಧನರಾಗಿದ್ದಾರೆ. ಸಿಂಧೂತಾಯಿ ಸಪ್ಕಾಲ್(74) ಪುಣೆಯ ಗ್ಯಾಲಕ್ಸಿ ಕೇರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. 10 ನೇ ವಯಸ್ಸಿಗೆ ಬಾಲ್ಯವಿವಾಹವಾಗಿ ನಾಲ್ಕು ಮಕ್ಕಳ ತಾಯಿಯಾಗಿದ್ದ ಸಿಂಧು ತಾಯಿ ಮುಂದೆ 1050ಕ್ಕೂ ಹೆಚ್ಚು ಮಕ್ಕಳ ಮಹಾತಾಯಿಯಾಗಿದ್ದರು.
ಹೌದು ಸಿಂಧುತಾಯಿ ಬಗ್ಗೆ ತಿಳಿಯಲೇ ಬೇಕಾದ ಸಂಗತಿ ಬಹಳಷ್ಟಿದೆ. ಬಾಲ್ಯ ವಿವಾಹವಾಗಿದ್ದ ಸಿಂಧು ತಾಯಿಯನ್ನು ಅವರ ಗಂಡ ಶ್ರೀಹರಿ ಸಪ್ಕಾಲ್ ತುಂಬು ಗರ್ಭಿಣಿಯಾದ ಅವರನ್ನು ಮನೆಯಿಂದ ಹೊರ ಹಾಕಿದ್ದ.
ತುಂಬು ಗರ್ಭಿಣಿಯಾದ ಅವರು ಎಲ್ಲಿಗೆ ಹೋಗಬೇಕು ಎಂದು ತಿಳಿಯದೇ ಮನೆಯ ಕೊಟ್ಟಿಗೆಯಲ್ಲಿಯೇ ಕೆಲ ಕಾಲ ಕಳೆದಳು. ಅಸಹನೀಯ ಬದುಕು ಕಷ್ಟವೆನಿಸಿತು. ಒಂದೆರಡು ದಿನ ಅಲ್ಲಿ ಇಲ್ಲಿ ಭಿಕ್ಷೆ ಬೇಡಿದಳು. ಬದುಕೋದು ಅಂದುಕೊಂಡಷ್ಟು ಸುಲಭವಿರಲಿಲ್ಲ. ಸಾಕು, ಈ ನಾಯಿ ಪಾಡು ಸತ್ತು ಬಿಡೋಣವೆಂದು ನಿರ್ಧರಿಸಿ, ಅವರು ಕೊನೆ ಕ್ಷಣದಲ್ಲಿ ತೆಗೆದುಕೊಂಡ ನಿರ್ಧಾರ ನಿಜಕ್ಕೂ ಮಾದರಿಯಾಗಿದೆ.
ಒಂದು ವೇಳೆ ಅವತ್ತೇ ಅವಳು ಆತ್ಮಹತ್ಯೆ ಮಾಡಿಕೊಂಡಿದ್ದರೆ ಸಾವಿರಾರು ಮಕ್ಕಳಿಗೆ ತಾಯಿಯಾಗುವ ಭಾಗ್ಯವನ್ನೇ ಕಳೆದುಕೊಳ್ಳುತ್ತಿದ್ದಳು ಈ ತಾಯಿ. ಈ ಅಮ್ಮನ ಜೀವನಾಧಾರಿತ ಕಥೆ 'ಮೀ ಸಿಂಧೂ ತಾಯಿ ಸಪ್ಕಾಲ್ ' 58ನೇ ಚಲನ ಚಿತ್ರೋತ್ಸವದಲ್ಲಿ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದೆ.
ಸಿಂಧುಗೆ ತಂದೆಯ ಬೆಂಬಲ:
ಸಿಂಧೂ, ಅಭಿಮಾನ ಸಾಥೆ ಎಂಬ ಅನಕ್ಷರಸ್ಥ ದನ ಕಾಯುವವನ ಮಗಳು. ಮಗಳನ್ನು ವಿದ್ಯಾವಂತೆಯನ್ನಾಗಿಸುವ ಆಸೆ ತಂದೆಗಿತ್ತು. ಆದರೆ, ಹೆಂಡತಿಯೇ ಅದಕ್ಕೆ ಅಡ್ಡಿಯಾಗಿದ್ದಳು. ಆದರೂ, ಮಗಳನ್ನು ದನ ಕಾಯುವ ನೆಪದಲ್ಲಿ ಹೊರಗೆ ಕರೆದುಕೊಂಡು ಹೋಗಿ ನಾಲ್ಕನೇ ತರಗತಿಯವರಿಗೆ ಓದಿಸಿದ್ದ.
ಪದ್ಮ ಪ್ರಶಸ್ತಿಯ ಜೊತೆಗೆ, ಸಪ್ಕಲ್ ತನ್ನ ಜೀವಿತಾವಧಿಯಲ್ಲಿ 750 ಕ್ಕೂ ಹೆಚ್ಚು ಪ್ರಶಸ್ತಿಗಳು ಮತ್ತು ಗೌರವಗಳನ್ನು ಪಡೆದಿದ್ದಾರೆ. ಪ್ರಶಸ್ತಿಯ ಹಣವನ್ನು ಅನಾಥ ಮಕ್ಕಳಿಗಾಗಿ ಆಶ್ರಯ ಮನೆಗಳನ್ನು ನಿರ್ಮಿಸಲು ಬಳಸಿದ್ದಾರೆ. ಈ ತಾಯಿಯ ಜೀವನ ಚರಿತ್ರೆ 'ಮೀ ವನವಾಸಿ'ಯಿಂದ ಆಯ್ತ ಭಾಗವನ್ನು ಕರ್ನಾಟಕ ಸರಕಾರದ 10ನೇ ತರಗತಿ ಮರಾಠಿ ಪಠ್ಯದಲ್ಲೂ ಸೇರಿಸಿತ್ತು. ಸಾವಿರಾರು ಮಕ್ಕಳಿಗೆ ನೈಜ ತಾಯಿಯಾದ ಸಿಂಧೂ ತಾಯಿ ಆತ್ಮಕ್ಕೆ ಶಾಂತಿ ಸಿಗಲಿ.
PublicNext
05/01/2022 02:22 pm