ಪಲಕ್ಕಾಡ್(ಕೇರಳ): ಮದುವೆಯಾಗಲು ಮನೆಯವರು ಒಪ್ಪುತ್ತಿಲ್ಲ. ಈ ಕಡೆ ಊರು ಬಿಡೋಣವೆಂದರೆ ಕೈಯಲ್ಲಿ ಹಣ ಇಲ್ಲ. ಹೇಗಪ್ಪಾ ಮಾಡೋದು ಎಂದು ಯೋಚಿಸಿದ ಪ್ರಿಯಕರ ತನ್ನಾಕೆಯನ್ನು ತನ್ನ ಮನೆಯಲ್ಲೇ ಬಚ್ಚಿಟ್ಟಿದ್ದ. ಹೀಗೆ ಬಚ್ಚಿಟ್ಟು ಹತ್ತು ವರ್ಷ ಕಳೆದಿದ್ದರೂ ಯಾರಿಗೂ ಗೊತ್ತಾಗಿರಲಿಲ್ಲ. ಅಚ್ಚರಿ ಎಂದರೆ ಆಕೆಯ ಮನೆಯೂ ಪ್ರಿಯಕರನ ಮನೆಯ 100 ಮೀಟರ್ ಅಂತರದಲ್ಲೇ ಇದ್ದರೂ ಮಗಳು ಇಲ್ಲಿದ್ದಾಳೆಂಬುದು ಪೋಷಕರಿಗೆ ಒಂದು ದಿನವೂ ಗೊತ್ತಾಗಿರಲಿಲ್ಲ. ಆಮೇಲೆ ಹೇಗೋ ಏನೋ ದಶಕದ ನಂತರ ಈ ವಿಷಯ ತಿಳಿದು ಈಗ ಅವರಿಬ್ಬರಿಗೂ ಮದುವೆ ಮಾಡಲಾಗಿದೆ.
ಪ್ರಪಂಚದಲ್ಲೇ ಯಾರೂ ಕಂಡು ಕೇಳರಿಯದ ವಾಸ್ತವ ಪ್ರೇಮಕತೆಯಿದು. ಕೇರಳದ ಪಲಕ್ಕಾಡ್ ಮೂಲದ ಈ ಜೋಡಿ ನಡುವೆ ದಶಕದ ಹಿಂದೆ ಪ್ರೇಮ ಮೊಳಕೆ ಒಡೆದಿತ್ತು. ರೆಹಮಾನ್ ಹಾಗೂ ಸಾಜಿತಾ ಎಂಬ ಈ ಜೋಡಿಯ ಪ್ರೇಮಕ್ಕೆ ಮನೆಯವರ ವಿರೋಧವೂ ಇತ್ತು. ಆಗ ಮನೆ ಬಿಟ್ಟು ಬಂದ ಪ್ರೇಯಸಿ ಕೇವಲ 100 ಮೀಟರ್ ಅಂತರದಲ್ಲಿದ್ದ ತನ್ನ ಪ್ರಿಯಕರನ ಮನೆಗೆ ಬಂದಿದ್ದಾಳೆ. ಬೇರೆ ಮನೆ ಮಾಡಲು ಹಣ ಇಲ್ಲ. ಹೀಗಾಗಿ ತನ್ನ ಮನೆಯ ಕೋಣೆಯಲ್ಲಿ ಕೂಡಿ ಹಾಕಿದ್ದಾನೆ. ಯಾರಿಗೂ ತಿಳಿಯದಂತೆ ರಾತ್ರಿ ಹೊತ್ತಲ್ಲಿ ಆಕೆ ಹೊರಬಂದು ಮನೆಯ ಹಿಂಭಾಗದಲ್ಲಿ ಸ್ನಾನ ಮಾಡುತ್ತಿದ್ದಳು. ಇತ್ತೀಚೆಗೆ ರೆಹಮಾನ್ ಕಾಣೆಯಾಗಿದ್ದ. ಈ ಬಗ್ಗೆ ಕುಟುಂಬಸ್ಥರು ದೂರು ಸಲ್ಲಿಸಿದ್ದರು. ಈ ನಡುವೆ ರೆಹಮಾನ್ ತನ್ನ ಸಹೋದರನ ಕಣ್ಣಿಗೆ ಸಿಕ್ಕಿಬಿದ್ದಿದ್ದ. ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿ ರೆಹಮಾನ್ ಅಲ್ಲಿ ನಡೆದ ಹಿಸ್ಟರಿಯನ್ನೆಲ್ಲ ಹೇಳಿದ್ದಾನೆ. ಆ ನಂತರವೇ ಇದೆಲ್ಲ ವಿಷಯ ಗೊತ್ತಾಗಿದೆ. ಅಚ್ಚರಿ ಎಂದರೆ ತಮ್ಮ ಮನೆಯ ಆ ಕೋಣೆಯಲ್ಲಿ ಒಬ್ಬ ಯುವತಿ ಇದ್ದಾಳೆಂಬ ವಿಷಯ ಮನೆಯವರಿಗೂ ಗೊತ್ತಿರಲಿಲ್ಲ.
ಇದೆಲ್ಲ ಮುಗಿದ ಮೇಲೆ ಮನೆಯವರು ಒಪ್ಪಿಕೊಂಡು ರೆಹಮಾನ್ ಹಾಗೂ ಸಾಜಿತಾಗೆ ಮದುವೆ ಮಾಡಿಸಿದ್ದಾರೆ. ಮದುವೆ ದಿರಿಸು ಧರಿಸಿ ಇಬ್ಬರೂ ಮದುವೆ ನೋಂದಣಿಗೆ ಸಹಿ ಹಾಕುವಾಗ ಇಬ್ಬರ ಮುಖದಲ್ಲಿನ ಸಾರ್ಥಕ ಮಂದಹಾಸ ಕಂಡು ಪೋಷಕರು ಕೂಡ ಖುಷಿ ಪಟ್ಟಿದ್ದಾರೆ. ಇವರ ಪ್ರೇಮ್ ಕಹಾನಿ ಕೇಳಿದ ಪೊಲೀಸರು ಕೂಡ ಇದು ಸಾಮಾನ್ಯ ಜೋಡಿ ಅಲ್ಲ. ಭಲೇ ಜೋಡಿ ಎಂದು ಶಹಬ್ಬಾಸ್ ಹೇಳಿ ಕಳುಹಿಸಿದ್ದಾರೆ.
PublicNext
16/09/2021 12:13 pm