ವರದಿ: ರಹೀಂ ಉಜಿರೆ
ಉಡುಪಿ :ತಮ್ಮ ದೈಹಿಕ ನ್ಯೂನತೆಗಳನ್ನೇ ಹೇಳುತ್ತಾ ,ಅದರ ಕುರಿತೇ ಚಿಂತಿಸುತ್ತಾ ಇಡೀ ಬದುಕನ್ನೇ ಮುಗಿಸುವವರು ಹಲವರು.ಆದರೆ ಈ ಸಾಧಕಿ ಅದಕ್ಕೆ ತದ್ವಿರುದ್ಧ. ಅಂಧತ್ವವನ್ನೇ ಮೆಟ್ಟಿ ನಿಂತು, ಈಕೆ ಸಾಧಿಸಿದ್ದು ಅದ್ಭುತ.ಕಣ್ಣೇ ಕಾಣದಿದ್ದರೂ ಈಕೆ ಪುಸ್ತಕ ಬರೆದಿದ್ದಾರೆ! ಜಗತ್ತನ್ನು ಕಣ್ಣಿಂದ ನೋಡಲಾಗದಿದ್ದರೂ, ವಿದೇಶಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಈಕೆ ಹಲವರಿಗೆ ಸ್ಪೂರ್ತಿಯ ಚಿಲುಮೆ....ಅಂತಹ ವಿಶೇಷ ಸಾಧಕಿಗೆ, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಇವತ್ತು ವಿಡಿಯೋ ಕಾಲ್ ಮೂಲಕ ಬರ್ಡೆ ವಿಶ್ ಮಾಡಿದ್ದಾರೆ.. ಯಾರು ಈ ಮಹಿಳೆ ? ಈಕೆಯ ಸಾಧನೆ ಎಂಥದ್ದು ....?
ಮನುಷ್ಯ ಜೀವನದಲ್ಲಿ ಯಾವುದೂ ಅಸಾಧ್ಯ ಎಂಬುದೇ ಇಲ್ಲ ಅಂತ ತೋರಿಸಿಕೊಟ್ಟಿದ್ದಾರೆ ದೃಶ್ಯದಲ್ಲಿ ಕಾಣುತ್ತಿರುವ ಈ ಮಹಿಳೆ... ಅಂಧತ್ವ ಶಾಪವಲ್ಲ, ವರ ಎನ್ನುವಂತೆ ಸಾಧಿಸಿ ಇತರರಿಗೂ ಸ್ಫೂರ್ತಿ ತುಂಬುವ ಛಲಗಾತಿಯ ಹೆಸರು ಸೌಮ್ಯ. ಉಡುಪಿಯ ಗುಂಡಿಬೈಲುವಿನ ಲಕ್ಷ್ಮಣ ,ಶ್ಯಾಮಲಾ ದಂಪತಿ ಪುತ್ರಿ ಈಕೆ. ಬಾಲ್ಯದಲ್ಲಿ ಸಾಮಾನ್ಯರಂತೆ ಇದ್ದ ಈಕೆಗೆ, ಸ್ನಾತಕೋತ್ತರ ಪದವಿ ಓದುತ್ತಿರುವಾಗ ಮ್ಯಾಕ್ಯೂಲರ್ ಡಿ ಜನರೇಷನ್ (macular degeneration) ಎನ್ನುವ ಕಣ್ಣಿನ ಸಮಸ್ಯೆ ವಕ್ಕರಿಸಿಕೊಳ್ಳತ್ತದೆ! ಎದುರು ನಿಂತವರೇ ಕಾಣದಷ್ಟು ಕುರುಡುತನ, ಬದಿಯ ವಸ್ತು ಕೂಡ ಕಾಣುವುದು ಅಲ್ಪಸ್ವಲ್ಪ. ರಾತ್ರಿ ಸಂಪೂರ್ಣ ಕರುಡುತನ ....
ಇಂತಹ ಅಪರೂಪದ ಈ ಖಾಯಿಲೆಗೆ ಸದ್ಯಕ್ಕೆ ಮದ್ದಿಲ್ಲ. ಹಾಗಂತ ಈಕೆ ತನ್ನ ಜೀವನವೇ ಮುಗಿಯಿತು ಎಂದು ಕೈ ಕಟ್ಟಿ ಕುಳಿತಿಲ್ಲ, ತನ್ನ ಆಸಕ್ತಿಯ ಕ್ಷೇತ್ರ ಸಾಹಿತ್ಯದ ಕಡೆಗೆ ಮತ್ತಷ್ಟು ತೊಡಗಿಸಿಕೊಳ್ಳತ್ತಾಳೆ. ಇದರ ಪ್ರತಿಫಲವೇ "ಹಿರಿಮನೆ ಎಸ್ಟೇಟ್," "ಆಗ ಸಂಜೆಯಾಗಿತ್ತು", "ಕತ್ತಲಲ್ಲೊಂದು ಕಿರಣ" ಎನ್ನುವ ಮೂರು ಅದ್ಭುತ ಪತ್ತೆದಾರಿ ಕಾದಂಬರಿಗಳು! ಇವರ ನಾಲ್ಕನೆಯ ಕಾದಂಬರಿ ತಿಂಗಳೊಳಗೆ ಬರಲಿದೆ. ಕಾದಂಬರಿ ಬರೆಯೋಕೆ ಸಾಧ್ಯವಾಗದ ಸೌಮ್ಯ, ಬೇರೊಬ್ಬರಿಗೆ ವಾಯ್ಸ್ ಮೆಸೇಜ್ ಮಾಡಿ ಅವರ ಸಹಾಯ ಪಡೆದು ಕಾದಂಬರಿ ರಚಿಸಿದ್ದಾರೆ.
ಸೌಮ್ಯ ಅವರಿಗೆ ಅಂಧತ್ವ ಇದ್ದರೂ ಕೂಡ ವಿದೇಶಿ ಕಂಪನಿಯೊಂದರ ಪ್ರಾಜೆಕ್ಟ್ ವರ್ಕ್ ಮನೆಯಲ್ಲೇ ಮಾಡುತ್ತಿದ್ದಾರೆ. ಹಲವು ಕಡೆಗಳಲ್ಲಿ ಸ್ಪೂರ್ತಿ ತುಂಬವ ಭಾಷಣ ಮಾಡಿ ಜೀವನೋತ್ಸಾಹ ಹೆಚ್ಚಿಸುತ್ತಿದ್ದಾರೆ. ಇಂತಹ ವಿಶೇಷ ಸಾಧಕಿಯನ್ನು ಗುರುತಿಸಿದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ಸೌಮ್ಯ ಅವರಿಗಿಂದು ವಿಡಿಯೋ ಕಾಲ್ ಮಾಡಿ ಬರ್ತ್ ಡೇ ವಿಶ್ ಮಾಡಿದ್ದಾರೆ. ಮುಂದಿನ ವಾರ ಊರಿಗೆ ಬಂದಾಗ ಮೀಟ್ ಆಗುವ ಭರವಸೆ ನೀಡಿದ್ದಾರೆ. ಮೀಟ್ ಆದಾಗ ತನ್ನ ಕಾದಂಬರಿ ಸಿನಿಮಾ ಮಾಡುವ ಬಯಕೆಯನ್ನು ಸಿಂಪಲ್ ಸ್ಟಾರ್ ಮುಂದಿಡಲಿದ್ದಾರಂತೆ ಸೌಮ್ಯ.ಮಗಳ ಸಾಧನೆ ಬಗ್ಗೆ ತಾಯಿಗೂ ಬಹಳ ಹೆಮ್ಮೆ.
ಎಲ್ಲವೂ ಸರಿ ಇದ್ದೂ, ಅವಕಾಶ ಇಲ್ಲ ಎಂದು ನೆಪ ಹೇಳಿಕೊಂಡು ಕಾಲ ಕಳೆಯುವ ಇಂದಿನ ದಿನಗಳಲ್ಲಿ, ಕುರುಡುತನ ಇದ್ದರೂ ಸಾಧಿಸುತ್ತಿರುವ ಸೌಮ್ಯ ಸಾಧನೆ ನಮಗೆಲ್ಲ ಸ್ಪೂರ್ತಿ,ಅಲ್ಲವೇ?
PublicNext
15/08/2021 07:40 am