ವರದಿ: ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ...!
ಬಳ್ಳಾರಿ; ನಾವೆಲ್ಲರೂ ಸ್ಪೈಡರ್ ಮ್ಯಾನ್ ಸ್ಟಂಟ್ ಗಳನ್ನು ಟಿವಿಯಲ್ಲಿ ನೋಡಿ ಅಚ್ಚರಿ ಪಟ್ಟಿದ್ದೇವೆ. ಏನಿದು ಸಾಹಸ ಅಂತೆಲ್ಲ ಬೇರಗಾದ ಕಣ್ಣಿನಿಂದ ನೋಡಿದ್ದೇವೆ. ಹಾಗಿದ್ದರೇ ನಿಮಗೆ ನಮ್ಮ ಉತ್ತರ ಕರ್ನಾಟಕ ಭಾಗದ ಸ್ಪೈಡರ್ ಮ್ಯಾನ್ ಪರಿಚಯಿಸಲೇ ಬೇಕು. ಯಾರಿದು ಸ್ಪೈಡರ್ ಮ್ಯಾನ್ ಅಂತೀರಾ ತೋರಸ್ತೀವಿ ನೋಡಿ..
ಒಬ್ಬೊಬ್ಬರಲ್ಲಿ ಒಂದೊಂದು ಹವ್ಯಾಸ, ಕೌಶಲ್ಯ ಇದ್ದೆ ಇರುತ್ತದೆ. ಹಾಗೆಯೇ ವಿಜಯನಗರದ ಯುವಕ ಮಧು ಚೌವ್ಹಾಣ್‌ನಲ್ಲೂ ಒಂದು ವಿಶೇಷ ಕೌಶಲವಿದೆ. ಕಟ್ಟಡದಿಂದ ಕಟ್ಟಡಕ್ಕೆ ಸ್ಪೈಡರ್ ಮ್ಯಾನ್‌ನಂತೆ ಜಿಗಿಯುವ ಮಧು ಕಸರತ್ತು ನೋಡಿ ಆಶ್ಚರ್ಯ ಪಡದವರೇ ಇಲ್ಲ. ಹೌದು.. ಮಧು ಚೌವ್ಹಾಣ್ (31) ಬಳ್ಳಾರಿ ಜಿಲ್ಲೆಯ ಸಿರುಗುಪ್ಪದ ಯುವಕ. 20 ವರ್ಷಗಳಿಂದಲೂ ಕಟ್ಟಡದಿಂದ ಕಟ್ಟಡಕ್ಕೆ ಜಿಗಿಯುವುದನ್ನು ಕಲೆಯಂತೆ ರೂಢಿಸಿಕೊಂಡು ಬಂದಿದ್ದಾರೆ. ತಾವು 5 ವರ್ಷದವರಿದ್ದಾಗಲೇ ಹೀಗೆ "ಸ್ಪೈಡರ್ ಮ್ಯಾನ್"ನಂತೆ ಜಿಗಿಯುವ ತಾಲೀಮು ಶುರುವಿಟ್ಟುಕೊಂಡಿದ್ದರಂತೆ.
ನ್ಯಾಷಿನಲ್ ಜಿಯೋಗ್ರಫಿ ಚಾನೆಲ್ ನಲ್ಲಿ ಒಂದು ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಅದರಲ್ಲಿ ಬರುವ ರಾಯ್ ರಿಂಡ್ ಡಾಯ್ ಮತ್ತು ಡೆನಲ್ ಇನ್ ಬ್ಯಾರ್ ಜಂಪ್ ಮಾಡುವ ದೃಶ್ಯಗಳೇ ನನ್ನ ಮೇಲೆ ಪ್ರಭಾವ ಬೀರಿದವು. ಈ ಕಾರ್ಯಕ್ರಮವನ್ನು ತಪ್ಪದೇ ನೋಡುತ್ತಿದ್ದೆ" ಎಂದು ವಿವರಿಸುತ್ತಾರೆ ಮಧು. ಮಧು ಹವ್ಯಾಸಕ್ಕೆ ಇಡೀ ಕುಟುಂಬವೇ ಪ್ರೋತ್ಸಾಹ ನೀಡಿತು.
ಮಧು ಸಿರುಗುಪ್ಪದ ಜ್ಞಾನ ಭಾರತಿ ಕಾಲೇಜಿನಲ್ಲಿ ಬಿಬಿಎಂ ಪದವಿ ಮುಗಿಸಿದ್ದಾರೆ. ಒಂದು ಬಾರಿ ಸಿರುಗುಪ್ಪದ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಜಿಗಿಯುವ ಸಂದರ್ಭ ಎರಡೂ ಕೈಗಳು ಫ್ರ್ಯಾಕ್ಚರ್ ಆಗಿದ್ದವು ಎಂದು ನೆನೆಸಿಕೊಳ್ಳುತ್ತಾರೆ ಮಧು. ಇಂಗ್ಲೆಂಡಿನ ಜಾಕ್ ಕೋರಿಸ್ ಅವರ ಮಾರ್ಗದರ್ಶನದಲ್ಲಿ ಈ ವಿಶೇಷ ಕಲೆ ಕಲಿಯುತ್ತಿದ್ದೇನೆ. ಯಾವ ರೀತಿ ಬೀಳಬೇಕು? ಏನು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು, ನಮ್ಮ ಭಂಗಿಗಳು ಹೇಗಿರಬೇಕು, ಯಾವ ವ್ಯಾಯಾಮ ಮಾಡಬೇಕು, ಜಿಗಿಯುವುದು ಹೇಗೆ ಎಲ್ಲವನ್ನೂ ಅವರಿಂದಲೇ ಕಲಿತೆ ಎಂದು ಹೇಳುತ್ತಾರೆ. ಅಲ್ಲದೇ ಮಧು ಕರಾಟೆಯಲ್ಲೂ ಮುಂದಿದ್ದಾರೆ. ರಾಜ್ಯ ಮಟ್ಟದಲ್ಲಿ ಮೂರು ಬಾರಿ ಪದಕ ಗೆದ್ದಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಮೂರನೇ ಸ್ಥಾನದಲ್ಲಿ ಗೆಲುವು ಸಾಧಿಸಿರುವುದಾಗಿ ತಿಳಿಸಿದ್ದಾರೆ. ಇವರ ಸಾಧನೆ ಕಂಡ ವರ್ಲ್ಡ್ ಫ್ರೀ ರನ್ನಿಂಗ್ ಫಾರಕೊ ಫೆಡರೇಶನ್ ಸದಸ್ಯತ್ವ ನೀಡಿದೆ. ಸದ್ಯ ರಿಲಯನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಇವರು.
ಒಟ್ಟಿನಲ್ಲಿ ಮಧು ಚವ್ಹಾಣ ಅವರ ಸಾಹಸ ಎಲ್ಲರನ್ನೂ ಹುಬ್ಬೇರುವಂತೆ ಮಾಡಿದೆ. ಆದರೆ ನೀವು ಯಾರು ಕೂಡ ತಾಲೀಮು ಇಲ್ಲದೇ ಇಂತಹ ಸಾಹಸಕ್ಕೆ ಕೈ ಹಾಕಬೇಡಿ. ಅದು ಏನೇ ಇರಲಿ ನಮ್ಮ ಉತ್ತರ ಕರ್ನಾಟಕದ ಪ್ರತಿಭೆ ಮಧು ಚವ್ಹಾಣ ಇನ್ನೂ ಹೆಚ್ಚು ಹೆಚ್ಚು ಸಾಧನೆ ಮಾಡಲಿ ಎಂಬುವುದು ನಮ್ಮ ಆಶಯ.
PublicNext
04/08/2021 04:10 pm