ದಾವಣಗೆರೆ: ಭಾರತೀಯ ಸೇನೆಯಲ್ಲಿ 21 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಹೆಚ್. ಸುರೇಶ್ ರಾವ್ ಘೋರ್ಪಡೆ ತವರಿಗೆ ಮರಳಿದ್ದಾರೆ. ದೇಶ ಸೇವೆಗೆ ಜೀವನ ಮುಡಿಪಿಟ್ಟು ಅತ್ಯುತ್ತಮ ಕಾರ್ಯ ಮಾಡಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದ ವೀರಯೋಧ ಸುರೇಶ್ ಅವರನ್ನು ಆತ್ಮೀಯವಾಗಿ ಜಿಲ್ಲಾಡಳಿತದ ವತಿಯಿಂದ ಬರಮಾಡಿಕೊಳ್ಳಲಾಯಿತು.
ಡಿಸಿ ಮಹಾಂತೇಶ್ ಆರ್. ಬೀಳಗಿ, ಎಸ್ಪಿ ರಿಷ್ಯಂತ್, ಕುಟುಂಬ ಸದಸ್ಯರು, ಸ್ನೇಹಿತರು ಅಭಿಮಾನಿಗಳು ಸುರೇಶ್ ಅವರಿಗೆ ನಗರದ ರೈಲ್ವೆ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ನೀಡಿದರು.
ದಾವಣಗೆರೆ ತಾಲೂಕಿನ ತೋಳಹುಣಸೆಯ ಹೆಚ್. ಸುರೇಶ್ ರಾವ್ ಘೋರ್ಪಡೆ ಅವರು ಹನುಮಂತಪ್ಪ ಹಾಗೂ ನಾಗಮ್ಮ ಇಟಗಿ ದಂಪತಿಯ ಪುತ್ರ. 1979ರ ಜೂನ್ 4ರಂದು ಹುಟ್ಟಿದ್ದ ಇವರು 2000 ನೇ ಇಸವಿಯಲ್ಲಿ ಶಿವಮೊಗ್ಗದಲ್ಲಿ ನಡೆದ ರ್ಯಾಲಿಯಲ್ಲಿ ಆಯ್ಕೆಯಾಗುವ ಮೂಲಕ ದೇಶ ಸೇವೆಗೆ ಹೋಗಿದ್ದರು. 21 ವರ್ಷಗಳಲ್ಲಿ ಹಲವು ಬಾರಿ ಆಪತ್ಕಾಲದಲ್ಲಿ ದೇಶಕ್ಕೆ ನೆರವಾಗುವ ಕೆಲಸ ಮಾಡಿದ್ದಲ್ಲದೇ, ಪದಕಗಳನ್ನು ಪಡೆದಿದ್ದಾರೆ.
ಪಾಕ್ ನ ಇಬ್ಬರು ಉಗ್ರರ ಹತ್ಯೆ, ಬಾಂಬ್ ನಿಷ್ಕ್ರಿಯ, ಕಳೆದು ಹೋದ ಬಾಂಬ್ ಪತ್ತೆ, ಹೊಸದಾಗಿ ಸೇನೆಗೆ ಸೇರುವವರಿಗೆ ತರಬೇತಿ ಸೇರಿದಂತೆ ಕರ್ತವ್ಯ ನಿರ್ವಹಿಸಿದ ಎಲ್ಲಾ ಕಡೆಗಳಲ್ಲಿಯೂ ಪ್ರಶಂಸೆಗೆ ಪಾತ್ರರಾಗಿದ್ದಾರೆ ಸುರೇಶ್.
2019ರಿಂದ ಶ್ರೀನಗರದಲ್ಲಿ ವಿಐಪಿ ಕರ್ತವ್ಯಕ್ಕೆ ನಿಯುಕ್ತಿಗೊಂಡಿದ್ದ ಸುರೇಶ್ ಅವರ ಸೇವೆಯನ್ನು ಪರಿಗಣಿಸಿ ಹವಾಲ್ದಾರ್ ಆಗಿ ಪ್ರಮೋಷನ್ ಕೊಡಲಾಗಿತ್ತು. ಈಗ ನಿವೃತ್ತರಾಗಿ ಊರಿಗೆ ಬಂದ ವೀರ ಸೇನಾನಿಯನ್ನು ಗೌರವ ನೀಡಲಾಯಿತು.
ಈ ವೇಳೆ ಮಾತನಾಡಿದ ಸುರೇಶ್, ದೇಶ ಸೇವೆ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಎಂದು ಹೇಳಿದ್ರು.
PublicNext
02/08/2021 04:00 pm