ಚೆನ್ನೈ : ಸುಡುವ ಟೈರ್ ಎಸೆದು ತಮಿಳುನಾಡು ರೆಸಾರ್ಟ್ ಕಾರ್ಮಿಕರು ಆನೆಯನ್ನು ಕೊಂದ ಘಟನೆ ಮಾಸುವ ಮುನ್ನ ಮತ್ತೊಂದು ಆನೆಗೆ ಹಿಂಸೆ ನೀಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರಾಣಿಗಳನ್ನು ಪ್ರೀತಿಯಿಂದ ಸಾಕುವ ಶಕ್ತಿ ಇರದಿದ್ದರೆ ಅವುಗಳನ್ನು ಅವುಗಳ ಪಾಡಿಗೆ ಬಿಟ್ಟು ಬಿಡಿ ಅವುಗಳನ್ನು ಕಟ್ಟಿಹಾಕುವ ಅಧಿಕಾರ ನಿಮಗಿಲ್ಲ ಎಂದು ಪ್ರಾಣಿ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪುನಶ್ಚೇತನ ಶಿಬಿರದಲ್ಲಿದ್ದ ಆನೆಯನ್ನು ಇಬ್ಬರು ಮಾವುತರು ಅಮಾನುಷವಾಗಿ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಮೂಕ ಪ್ರಾಣಿಯನ್ನು ನಡೆಸಿಕೊಂಡಿರುವ ರೀತಿಗೆ ಆಕ್ರೋಶ ವ್ಯಕ್ತವಾಗಿದೆ.
ತಮಿಳುನಾಡಿನ ಕೊಯಮತ್ತೂರಿನಲ್ಲಿ ಮರಕ್ಕೆ ಆನೆ ಕಟ್ಟಿಹಾಕಿದ ಮಾವುತರು ಅದಕ್ಕೆ ಮನಬಂದಂತೆ ಕೋಲಿನಿಂದ ಥಳಿಸಿದ್ದಾರೆ. ನೋವಿನಿಂದ ಒದ್ದಾಡುತ್ತಾ ಆನೆ ಕೂಗುತ್ತಿದ್ದರೂ ಬಿಡದೇ ನಿರಂತರವಾಗಿ ಥಳಿಸಿದ್ದಾರೆ. 20 ಸೆಕೆಂಡುಗಳ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಾವುತರ ಈ ಕೃತ್ಯಕ್ಕೆ ಖಂಡನೆ ವ್ಯಕ್ತವಾಗಿದೆ.
ಹತ್ತೊಂಬತ್ತು ವರ್ಷದ ಹೆಣ್ಣಾನೆ ಜಯಮಾಲ್ಯತಾ ಶ್ರೀವಿಲಿಪುತ್ತೂರಿನ ಅಂಡಾಳ್ ದೇವಸ್ಥಾನದ್ದಾಗಿದ್ದು, ಫೆಬ್ರವರಿ 8ರಿಂದ ಆರಂಭವಾಗಿರುವ 13ನೇ ವಾರ್ಷಿಕ ಪುನಶ್ಚೇತನ ಶಿಬಿರಕ್ಕೆ ಕಳುಹಿಸಲಾಗಿತ್ತು. ಆದರೆ ಶಿಬಿರದಲ್ಲಿ ಆನೆಯನ್ನು ಈ ರೀತಿ ನಡೆಸಿಕೊಳ್ಳಲಾಗಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಮೆಟ್ಟುಪಾಳ್ಯಂನ ತೆಕ್ಕಂಪಟ್ಟಿಯಲ್ಲಿ ಅರಣ್ಯ ಇಲಾಖೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ವಯ ಭಾನುವಾರ ಮಾವುತ ವಿನಿಲ್ ಕುಮಾರ್ (45) ಹಾಗೂ ಆತನ ಸಹಾಯಕ ಶಿವಪ್ರಸಾದ್ ನನ್ನು ಬಂಧಿಸಿದೆ.
2011ರಲ್ಲಿ ಜಯಮಾಲ್ಯತಾ ಆನೆಗೆ ಮಾವುತನಾಗಿ ವಿನಿಲ್ ನನ್ನು ನಿಯೋಜಿಸಲಾಗಿತ್ತು.
PublicNext
22/02/2021 04:21 pm