ಬಿಲಾಸ್ಪುರ್: ಸಾಮಾನ್ಯವಾಗಿ ಅತ್ತೆ ಸೊಸೆ ಅಂದ್ರೆ ಹಾವು ಮುಂಗುಸಿ ಇದ್ದಂತೆ ಎನ್ನುವವರೇ ಹೆಚ್ಚು. ಕೆಲವು ಕಡೆ ಅತ್ತೆ ಸೊಸೆ ಅಂದ್ರೆ ಅಮ್ಮ ಮಗಳು ಇದ್ದ ಹಾಗೆ ಇರುವವರು ಇದ್ದಾರೆ.
ಸದ್ಯ ಇಲ್ಲೊಂದು ಕುಟುಂಬದಲ್ಲಿ ಅತ್ತೆಯೇ ದೇವರು. ಅತ್ತೆ ಸತ್ತು 10 ವರ್ಷವಾದರೂ ಈಗಲೂ ಅವರನ್ನು ದೇವರಂತೆ ಪೂಜಿಸಲಾಗುತ್ತಿದೆ.
ಅವರ ಸೊಸೆಯಂದಿರು ಅತ್ತೆಯ ಗುಡಿಯನ್ನು ಕಟ್ಟಿ ಪ್ರತಿದಿನ ಪೂಜೆಯನ್ನೂ ಮಾಡುತ್ತಿದ್ದಾರೆ. ತಿಂಗಳಿಗೊಮ್ಮೆ ಅತ್ತೆ ಹೆಸರಿನಲ್ಲಿ ಭಜನೆ, ಕೀರ್ತನೆಯೂ ನಡೆಯುತ್ತದೆ.
ಚತ್ತೀಸಗಢದ ಬಿಲಾಸ್ಪುರದ ಜಿಲ್ಲೆಯ ರತ್ನಾಪುರ ಗ್ರಾಮದ ತಂಬೋಲಿ ಕುಟುಂಬವೇ ಅದಕ್ಕೆ ಸಾಕ್ಷಿ. ಇದು ಕೂಡು ಕುಟುಂಬ. ಕುಟುಂಬದ ಮುಖ್ಯಸ್ಥೆ ಗೀತಾ ದೇವಿ. 11 ಸೊಸೆಯಂದಿರ ಅತ್ತೆ ಗೀತಾ 2010ರಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಆದರೆ ಅತ್ತೆ ಕಲಿಸಿಕೊಟ್ಟ ಆದರ್ಶ ಆ ಮನೆಯ ಸೊಸೆಯಂದಿರಿಗೆ ಇಂದಿಗೂ ಮಾದರಿ..
ಅತ್ತೆ ಬದುಕಿದ್ದಾಗ ಸೊಸೆಯಂದಿರನ್ನು ಸ್ವಂತ ಮಕ್ಕಳಂತೆ ನೋಡಿಕೊಂಡಿದ್ದರಂತೆ. ಅದೇ ಪ್ರೀತಿಯನ್ನು ಅತ್ತೆಯ ಬಗ್ಗೆ ತೋರಿಸುತ್ತಿದ್ದ ಸೊಸೆಯಂದಿರು ಅವರ ಹೆಸರಿನಲ್ಲಿ ಒಂದು ಸಣ್ಣ ಗುಡಿಯನ್ನು ಕಟ್ಟಿದ್ದಾರೆ. ಅತ್ತೆಯ ಮೂರ್ತಿ ಮಾಡಿಸಿ, ಅದಕ್ಕೆ ತಮ್ಮ ಚಿನ್ನಾಭರಣವನ್ನು ಹಾಕಿದ್ದಾರೆ.
ಅಂದಿನಿಂದ ಇಂದಿನವರೆಗೆ ಆ ಮೂರ್ತಿಗೆ ಪ್ರತಿದಿನ ಪೂಜೆ ಮಾಡಿಕೊಂಡು ಬಂದಿದ್ದಾರೆ. ಅಷ್ಟೇ ಅಲ್ಲದೆ ತಿಂಗಳಿಗೊಮ್ಮೆ ಅತ್ತೆಯ ಹೆಸರಿನಲ್ಲಿ ಭಜನೆ, ಕೀರ್ತನೆಯನ್ನೂ ಮಾಡುತ್ತಾರಂತೆ.
39 ಜನರಿರುವ ಈ ಕೂಡು ಕುಟುಂಬದ ಎಲ್ಲ ಹೆಣ್ಣು ಮಕ್ಕಳು ವಿದ್ಯಾವಂತರು. ಸ್ನಾತಕೋತ್ತರ ಪದವಿ ಪಡೆದವರೂ ಇದ್ದಾರೆ. ಆದರೆ ಇವರೇಲ್ಲ ಹೊಂದಾಣಿಕೆಯಿಂದ ಬದುಕು ನಡೆಸುತ್ತಿರುವುದು ನಿಜಕ್ಕೂ ಮಾದರಿ..
PublicNext
18/01/2021 09:36 pm