ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಾನಯಾನ ಮುಗಿಸಿ ಚಿರನಿದ್ರೆಗೆ ಜಾರಿದ ಸಂಗೀತ ಸರಸ್ವತಿ ಪುತ್ರ

ಪಬ್ಲಿಕ್ ನೆಕ್ಸ್ಟ್ ಸ್ವರಾಂಜಲಿ : ಕೇಶವ ನಾಡಕರ್ಣಿ

ಸುಮಾರು ಐದು ದಶಕಗಳಗಿಂತಲೂ ಹೆಚ್ಚುಕಾಲ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿ, ಅನೇಕ ಧೀಮಂತ ನಟರಿಗೆ ಧ್ವನಿಯಾಗಿದ್ದ ಬಹುಭಾಷಾ ಗಾಯಕ, ಗಾನ ವಿಶಾರದ, ಸರಸ್ವತಿ ಪುತ್ರ ಎಸ್.ಪಿ ಬಾಲಸುಬ್ರಮಣ್ಯಂ( 74) ಇಂದು ತಮ್ಮ ಗಾನಯಾನ ಮುಗಿಸಿದ್ದಾರೆ.

ಕೊರೊನಾ ಪೀಡಿತರಾಗಿ ಚೆನ್ನೈನ ಆಸ್ಪತ್ರೆಯಲ್ಲಿ ಕಳೆದ ಕೆಲವು ವಾರಗಳಿಂದ ಸಾವು ಬದುಕಿನ ನಡುವೆ ಹೋರಾಡಿದ ನಮ್ಮ ನಿಮ್ಮೆಲ್ಲರ ಪ್ರೀತಿಯ ಎಸ್‌ಪಿಬಿ ಇನ್ನು ನೆನಪು ಮಾತ್ರ. ಅವರ ಅರೋಗ್ಯಕ್ಕಾಗಿ ಪ್ರಾರ್ಥಿಸದ ಮನಗಳಿಲ್ಲ, ಮುಗಿಯದ ಕೈಗಳಿಲ್ಲ, ಮಾಡದ ಯಜ್ಞ ಯಾಗಾದಿಗಳಿಲ್ಲ.

ಸಂಗೀತ ಪ್ರೇಮಿಗಳ ಕೂಗು ದೇವರಿಗೆ ತಲುಪಿತೋ ಏನೋ ಎಂಬಂತೆ ಕೆಲವು ದಿನಗಳಿಂದ ಅವರ ಆರೋಗ್ಯ ಸುಧಾರಿಸುತ್ತಿದೆ ಎಂದು ಅವರ ಪುತ್ರ ಹೇಳಿದಾಗ ಎಲ್ಲರಿಗೂ ಆಗಿದ್ದ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೆ ಮತ್ತೇ ದೇವರ ಮನಸ್ಸು ಒಪ್ಪಲಿಲ್ಲವೇನೊ. ಈ ಗಾನಗಂಧರ್ವನನ್ನು ತನ್ನ ಆಸ್ಥಾನಕ್ಕೆ ಕರೆಸಿಕೊಂಡೇ ಬಿಟ್ಟ.

ಹಾಡಿ ದಣಿದ ಸುಪುತ್ರ ಸಂಗೀತ ಸರಸ್ವತಿ ಮಡಿಲಲ್ಲಿ ಶಾಶ್ವತವಾಗಿ ಮಲಗಿ ಕೋಟ್ಯಂತರ ಅಭಿಮಾನಿಗಳನ್ನು ದುಃಖದ ಕಡಲಿಗೆ ತಳ್ಳದ. ನಿಜಕ್ಕೂ ಇಂದು ಮತ್ತೊಮ್ಮೆ ಸಂಗೀತ ಕ್ಷೇತ್ರ ಬಡವಾಯಿತು. ಸಪ್ತ ಸ್ವರಗಳೂ ತಮ್ಮ ನಿನಾದ ಕಳೆದುಕೊಂಡವು.

ಹಿನ್ನೆಲೆ ಸಂಗೀತದಲ್ಲಿ ಬಾಲು ಹೆಜ್ಜೆಯಲ್ಲಿ ಹೆಜ್ಜೆಯನಿಟ್ಟು ನಡೆದವರು, ಅವರ ಕಂಠ ಹಾಗೂ ಶೈಲಿಯನ್ನು ಅನುಕರಿಸಿಯೇ ಸಿನೆಮಾ ರಂಗದಲ್ಲಿ ಬದುಕು ಕಂಡವರಿಗೆ ಇಂದು ಅನಾಥ ಭಾವನೆ ಕಾಡದಿರದು.

1946 ರಲ್ಲಿ ತಮಿಳ್ನಾಡಿನಲ್ಲಿ ಜನಿಸಿದ ಬಾಲು ಬದುಕು ಕಟ್ಟಿಕೊಂಡಿದ್ದು ನೆರೆಯ ಆಂದ್ರದಲ್ಲಿ. ಆದರೆ ಹಿನ್ನೆಲೆ ಗಾಯಕನಾಗಿ, ಭಕ್ತಸಂಗೀತದ ಮಾಂತ್ರಿಕನಾಗಿ, ನಟನಾಗಿ ವಿಜೃಂಭಿಸಿದ್ದು ಕನ್ನಡದೇವಿಯ ನೆಲದಲ್ಲಿ. ಕರ್ನಾಟಕದ ಸಂಗೀತ ಪ್ರೇಮಿಗಳು ಎಸ್ಪಿಬಿ ಅನ್ಯ ಭಾಷಿಕರು ಎಂಬುದನ್ನು ಒಪ್ಪಿಕೊಳ್ಳುವುದೇ ಇಲ್ಲ. ಆರಂಭದಲ್ಲಿ ಕನ್ನಡ ಭಾಷೆ ಮಾತನಾಡಲು ತೊದಲುತ್ತಿದ್ದರೂ ಕೊನೆ ಕೊನೆಗೆ, ಕನ್ನಡದಲ್ಲಿಯೇ ಮಿಂದವರಂತೆ ಅಸ್ಖಲಿತವಾಗಿ ಮಾತನಾಡ ತೊಡಗಿದ್ದರು.

ಪಿ.ಬಿ ಶ್ರೀನಿವಾಸ್ ನಿಧನದ ನಂತರ ಕನ್ನಡ ಚಿತ್ರರಂಗ ಬಹುತೇಕ ಬಡವಾಗಿತ್ತು. ನಟಸಾರ್ವಭೌಮ ರಾಜಕುಮಾರ ತಮ್ಮ ಹಾಡುಗಳಿಗೆ ತಾವೇ ಧ್ವನಿ ನೀಡುತ್ತಿದ್ದರಲ್ಲದೆ ಬೇರೆ ನಟರಿಗೂ ಧ್ವನಿ ನೀಡಿ ಆ ಕೊರತೆಯನ್ನು ತುಂಬಿದ್ದರು. ನಂತರ ಮುನ್ನೆಲೆಗೆ ಬಂದವರು ಬಾಲು.

ಕನ್ನಡ, ಹಿಂದಿ, ತೆಲಗು, ತಮಿಳು, ಮಲೆಯಾಳಂ ಸೇರಿದಂತೆ 16 ಭಾಷೆಗಳಲ್ಲಿ ಸುಮಾರು 40 ಸಾವಿರಕ್ಕಿಂತಲೂ ಹೆಚ್ಚು ಹಾಡು ಹಾಡಿ ಗಿನ್ನೀಜ್ ದಾಖಲೆ ಸೇರಿದ್ದರು. ಬಾಲು ಕೇವಲ ಹಿನ್ನೆಲೆ ಗಾಯಕರಾಗಿರಲಿಲ್ಲ, ಉತ್ತಮ ನಟರೂ ಆಗಿದ್ದರು. ಅವರ ಸಮಾಜಿಕ ಕಳಕಳಿ ನಿಜಕ್ಕೂ ಮೆಚ್ಚುಂತಹದು. ತಮ್ಮ ಎಲ್ಲ ಕಾರ್ಯಕ್ರಮಗಳ ಕೊನೆಗೆ ಅವರು ನೀಡುತ್ತಿದ್ದ ಸಂದೇಶಗಳು ದಾರಿದೀಪವಾಗಿವೆ.

ಬನ್ನಿ ನೋಡೊಣ ಎಸ್ಪಿಬಿ ಅವರ ಸಂಗೀತ ಪಯಣದ ಒಂದು ಝಲಕ್

" ಶಂಕರಾ...ನಾದ ಶರೀರಾಪರಾ ವೇದವಿರಾಹಾರಾ ಜೀವೇಶ್ವರಾ " ಸಂಪೂರ್ಣ ಭಕ್ತಿ ಸಂಗೀತ ಆಧಾರಿತ ( 1980) ಶಂಕರಾಭರಣಂ ತೆಲಗು ಚಿತ್ರದ ಗೀತೆಗಳಿಗೆ ಬಾಲಮುರಳಿ ಕೃಷ್ಣ ಧ್ವನಿ ನೀಡಬೇಕಾಗಿತ್ತು.

ಆದರೆ ಸಮಯಾಭಾವದಿಂದ ಬಾಲಮುರಳಿ ಕೃಷ್ಣ ಅವರಿಗೆ ರಿಕಾರ್ಡಿಂಗಿಗೆ ಬರಲಾಗಲಿಲ್ಲ. ಹಾಗಾದರೆ ಎಸ್ ಪಿ ಬಿ ಅವರಿಂದ ಏಕೆ ಹಾಡಿಸಬಾರದು ಎಂಬ ಆಲೋಚನೆ ಸಂಗೀತ ನಿರ್ದೇಶಕ ಕೆ.ವಿ ಮಹದೇವನ್ ಅವರಿಗೆ ಬಂತು. ಇದನ್ನು ಎಸ್ಪಿಬಿ ಮುಂದೆ ಹೇಳಿದಾಗ ಕೆನ್ನೆ ಕೆನ್ನೆ ಬಡಿದುಕೊಂಡ ಈ ಮಹಾನ್ ಗಾಯಕ ಹೇಳಿದ್ದೇನು ಗೊತ್ತೆ? ಅಯ್ಯೋ ನನ್ನ ಗುರುಗಳು ಆರಾಧ್ಯ ದೈವ ಹಾಡಬೇಕಾದ ಹಾಡುಗಳನನ್ನು ನಾನು ಹಾಡಲು ಸಾಧ್ಯವೆ ಎಂದಿದ್ದರಂತೆ.

" ರಿಕಾರ್ಡಿಂಗ್ ತಡವಾಗಿ ತೊಂದರೆಯಾಗುತ್ತಿದೆ ಪ್ಲೀಜ್ ನೀವೇ ಹಾಡಿ. ನಂತರ ಬಾಲಮುರಳಿ ಕೃಷ್ಣ ಗಮನಕ್ಕೆ ತಂದು ನಾನು ಕ್ಷಮೆ ಕೇಳುತ್ತೇನೆ'' ಎಂದು ಮಹದೇವನ್ ವಿನಂತಿಸಿದ ಮೇಲೆ ಬಾಲು ಅದೊಂದು ಸಂಗೀತ ಸೇವೆ ಎಂಬಂತೆ ತನ್ಮಯರಾಗಿ ಎಲ್ಲ ಹಾಡುಗಳನ್ನು ಒಂದೊಂದೆ ಟೇಕ್ ದಲ್ಲಿ ಹಾಡಿ ಮುಗಿಸಿದರು. ಇಷ್ಟೇ ಅಲ್ಲ, ನಿಮಗೆ ಸರಿಯಾಗದಿದ್ದರೆ ನನ್ನ ಗುರುಗಳಿಂದಲೇ ಮತ್ತೊಮ್ಮೆ ಹಾಡಿಸಿ ಎಂದು ವಿನಮ್ರವಾಗಿ ಹೇಳಿದ್ದರಂತೆ

ಶಿಷ್ಯ ಬಾಲು ಹಾಡಿದ ಹಾಡುಗಳನ್ನು ಕೇಳಿದ ಬಾಲಮುರಳಿ ಕೃಷ್ಣ '' ನಿಜವಾಗಿಯೂ ಅದ್ಭುತವಾಗಿ ಬಂದಿವೆ. ಆತ ಸಿನೆಮಾ ಹಾಡು ಹಾಡಿಲ್ಲ ಸಂಗೀತಾರಾಧನೆ ಮಾಡಿದ್ದಾನೆ. ನಾನೇ ಹಾಡಿದ್ದರೂ ಇಷ್ಟು ಚೆನ್ನಾಗಿ ಬರುತ್ತಿರಲಿಲ್ಲವೇನೋ. ಇವುಗಳನ್ನೆ ಬಳಸಿ '' ಎಂದಾಗ ಎಸ್ಪಿಬಿ ಅವರ ಆನಂದಕ್ಕೆ ಪಾರವೇ ಇರಲಿಲ್ಲವಂತೆ.

40 ವರ್ಷಗಳಾದರೂ ಶಂಕರಾಭರಣಂ ಚಿತ್ರ ಹಾಡುಗಳು ಜನಪ್ರಿಯತೆ ಕಡಿಮೆ ಆಗಿಲ್ಲ. ಭಾಷೆಯ ಎಲ್ಲೆ ಮೀರಿ ಎಲ್ಲ ಸಂಗೀತ ಪ್ರಿಯರು ಇಂದಿಗೂ ಅವುಗಳನ್ನು ಆಸ್ವಾದಿಸುತ್ತಿದ್ದಾರೆ.

1981 ರಲ್ಲಿ ಯುವ ಪ್ರೇಮಿಗಳ ಮನಸೂರೆಗೊಂಡಿದ್ದ, ಕಮಲ್ ಹಾಸನ್ ರತಿ ಅಗ್ನಿಹೋತ್ರಿ ಹಾಗೂ ಮಾಧವಿ ನಟಿಸಿದ್ದ ಏಕ್ ದೂಜೆ ಕೆ ಲಿಯೆ ಹಿಂದಿ ಚಿತ್ರ ಇತಿಹಾಸವನ್ನೇ ನಿರ್ಮಿಸಿತ್ತು. ತಮಿಳು ಹಾಗೂ ಹಿಂದಿ ಭಾಷಿಕ ಕುಟುಂಬಗಳ ಕಿತ್ತಾಟ, ನಾಯಕ ನಾಯಕಿಯ ಪ್ರೇಮ ಹಾಗೂ ದುರಂತದಲ್ಲಿ ಅಂತ್ಯ. ಪ್ರೇಮಕ್ಕೆ ಭಾಷೆ, ಜಾತಿ ಆಚಾರ ವಿಚಾರದ ಗೋಡೆ ಕಟ್ಟಬಾರದು ಎಂಬುದು ಕಥಾ ಸಾರವಾಗಿತ್ತು. ದೂಜೆ ಕೆ ಲಿಯೆ ಚಿತ್ರ ತೆಲಗಿನ " ಮರೊ ಚರಿತ್ರ'' ಚಿತ್ರದ ಹಿಂದಿ ಅವತರಣಿಕೆ ಆಗಿತ್ತು. ಅದರಲ್ಲಿಯೂ ನಾಯಕನಾಗಿ ಕಮಲ್ ಹಾಸನ್ ನಟಿಸಿದ್ದರು.

ಚಿತ್ರ ನಾಯಕ ತಮಿಳು ಭಾಷಿಕ ಹಾಗೂ ನಾಯಕಿ ಹಿಂದಿ. ಹೀಗಾಗಿ ನಾಯಕ ಹಿಂದಿಯಲ್ಲಿ ಹಾಡಿದರೂ ಅವುಗಳ ಮೇಲೆ ತಮಿಳು ಭಾಷೆ ಛಾಯಿ ಇರಬೇಕು ಎಂಬುದು ನಿರ್ದೇಶಕ ಕೆ. ಬಾಲಚಂದರ್ ಯೋಚನೆ ಆಗಿತ್ತು. ಹಾಗಾದರೆ ಹಿಂದಿ ತಮಿಳು ಸ್ಟೈಲ್ ದಲ್ಲಿ ಹಿಂದಿ ಹಾಡುವ ಹಿನ್ನೆಲೆ ಗಾಯಕ ಯಾರು? ಎಂಬ ಪ್ರಶ್ನೆ ಮುಂದಿಟ್ಟಿದ್ದರು ಖ್ಯಾತ ಸಂಗೀತ ನಿರ್ದೇಶಕ ಲಕ್ಷ್ಮೀಕಾಂತ ಪ್ಯಾರೇಲಾಲ್.

ಆಗ ಬಾಲಚಂದರ್ ಹೇಳಿದ್ದು, ಅದೇ ತಾನೆ ಪ್ರವರ್ಧಮಾನಕ್ಕೆ ಬರುತ್ತಿದ್ದ ದಕ್ಷಿಣ ಭಾರದ ಎಸ್.ಪಿ ಬಾಲಸುಬ್ರಮಣ್ಯಂ ಹೆಸರು. ಬಾಲು ಹೆಸರು ಕೇಳಿದ ಲಕ್ಷ್ಮೀಕಾಂತ ಪ್ಯಾರೇಲಾಲ್ '' ಏನು ಆತನಿಗೆ ಹಿಂದಿ ಹಾಡಲು ಬರುತ್ತದೆಯೇ? ಎಂದು ಕೇಳಿದ್ದರಂತೆ. ಮುಂದಿನದು ಇತಿಹಾಸ.

ಅಂದು ಏಕ್ ದೂಜೆ ಕೆ ಲಿಯೆ ಚಿತ್ರಕ್ಕಾಗಿ ಬಾಲು ಹಾಡಿದ ಈ " ತೇರೆ ಮೇರೆ ಬೀಚಮೇ ಕೈಸಾ ಹೈ ಏ ಬಂಧನ್ ಅಂಜಾನಾ...ಹಮ್ ತುಮ್ ದೋನೊ ಜಬ್ ಮಿಲ್ಜಾಯೇಂಗೆ ಏಕೆ ನಯಾ ಇತಿಹಾಸ್ ಬನಾಯೇಂಗೆ '' ಈ ಹಾಡುಗಳು, ಹಿನ್ನೆಲೆ ಗಾಯನ ಹಾಗೂ ಬಾಲು ಮೇಡ್ ಫಾರ್ ಈಚ್ ಅದರ್ ಎಂಬುದನ್ನು ಸಾಬೀತು ಪಡಿಸಿದವಲ್ಲವೆ, ಹಾಡಿನಲ್ಲಿ ಹೇಳಿದಂತೆ " ಏಕ್ ನಯಾ ಇತಿಹಾಸ್ '' ಸಹ ಬರೆದವು.

ಬಾಲು ಹಾಡುಗಳನ್ನು ರಿಕಾರ್ಡ ಮಾಡಿದ ನಂತರ ಸಂಗೀತ ಮಾಂತ್ರಿಕ ಲಕ್ಷ್ಮೀ ಪ್ಯಾರೆ ಅವರು ಬಾಲು ಬೆನ್ನು ತಟ್ಟಿ ನೀನೊಬ್ಬ ಮಹಾನ್ ಹಿನ್ನೆಲೆ ಗಾಯಕನಾಗುತ್ತಿ ನಿನ್ನ ಗಾನ ಯಾನ ಮುಂದುವರಿಸು ಎಂದು ಆಶೀರ್ವದಿಸಿದ್ದರಂತೆ. ಇತ್ತೀಚೆಗೆ ಸೋನಿ ಚಾನಲ್ ದ ಇಂಡಿಯನ್ ಐಡಲ್ ದಲ್ಲಿ, ಸ್ಪರ್ಧಿಯೊಬ್ಬ " ತೇರೆ ಮೇರೆ ಬೀಚಮೇ '' ಹಾಡ ತೊಡಗಿದಾಗ , ತೀರ್ಪುಗಾರರಾಗಿ ಬಂದಿದ್ದ ಪ್ಯಾರೇಲಾಲ್ ( ಲಕ್ಷ್ಮೀಕಾಂತ ಈಗಿಲ್ಲ) ಸ್ವತಃ ವೈಯಲಿನ್ ನುಡಿಸಿ ವಾದ್ಯವೃಂದಕ್ಕೆ ಸಾಥ ನೀಡಿ, ಆ ದಿನಗಳನ್ನು ಮೆಲಕು ಹಾಕಿದ್ದು ಈ ಮಹಾನ್ ಗಾಯಕನ ಸಾಧನೆಗೆ ಸಾಕ್ಷಿಯಾಗಿತ್ತು.

ಶ್ರೀಪತಿ ಪಂಡಿತಾರಾಧ್ಯಲು ಬಾಲಸುಬ್ರಮಣ್ಯಂ 1964 - 65 ರಲ್ಲಿ '' ನಕ್ಕರೆ ಅದೇ ಸ್ವರ್ಗ'' ಚಿತ್ರದ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದ್ದರು. ಆಗ ಪಿ.ಬಿ ಶ್ರೀನಿವಾಸ, ಘಂಟಸಾಲಾ ಅವರಂತಹ ದಿಗ್ಗಜರಿಂದಾಗಿ ಅಷ್ಟಾಗಿ ಬೆಳಕಿಗೆ ಬಂದಿರಲಿಲ್ಲ. ಆದರೆ ಕನ್ನಡದಲ್ಲಿ ಸಿಕ್ಕ ಅವಕಾಶ ಬಿಟ್ಟುಕೊಡುತ್ತಿರಲಿಲ್ಲ. ಚಿತ್ರಗಳು ಡಬ್ಬಾ ಆಗಿದ್ದರೂ ಇವರ ಹಾಡುಗಳಿಂದ ಅದು ಇಂದಿಗೂ ಜನಮಾನಸದಲ್ಲಿವೆ.

ಬಾಲುಗೆ ಬ್ರೇಕ್ ಸಿಕ್ಕಿದ್ದು ರವಿಚಂದ್ರನ್ 1987 ರಲ್ಲಿ ನಿರ್ಮಿಸಿ ನಿರ್ದೇಶಿಸಿದ ಪ್ರೇಮಲೋಕ ಚಿತ್ರ. ಹಿಂದಿಯ ಜೂಹಿ ಚಾವ್ಲಾ ಅವರನ್ನು ಕನ್ನಡಕ್ಕೆ ತಂದು, ಖ್ಯಾತ ನಟ ವಿಷ್ಣುವನ್ನು ಅತಿಥಿ ನಟರಾಗಿ ಮಾಡಿದ್ದಲ್ಲದೆ ವಿ‍ಶಿಷ್ಟ ಹಾಡು, ಸುಂದರ ಸೆಟ್ ಗಳ ಮೂಲಕ ರವಿ ಇತಿಹಾಸ ನಿರ್ಮಿಸಿದರು. ಆ ಚಿತ್ರದ ಹಾಡುಗಳೆ ಗೀತರಚೆನಕಾರ ಹಂಸಲೇಖ ಅವರಿಗೆ ಖ್ಯಾತಿ ತಂದುಕೊಟ್ಟಿದ್ದು. ಅಂದು ಖ್ಯಾತಿ ಶಿಖರವೇರ ತೊಡಗಿದ್ದ ಬಾಲು ಹಿಂತಿರುಗಿ ನೋಡಿದ್ದೇ ಇಲ್ಲ.

ಚಲನ ಚಿತ್ರ ಹಾಡುಗಳ ಇಂದಿನ ರಿಯಾಲಿಟಿ ಶೋಗಳಿಗೆ ನಾಂದಿ ಹಾಡಿದ್ದೇ ಬಾಲು ಸಾರಥ್ಯದ "ಎದೆ ತುಂಬಿ ಹಾಡುವೆನು '' ಕಾರ್ಯಕ್ರಮ. ಅರ್ಚನಾ ಉಡಪ್, ರಾಜೇಶ್ ಕೃಷ್ಣನ್, ವಿಜಯ ಪ್ರಕಾಶ್ ಹೀಗೆ ಅನೇಕ ಹಿನ್ನೆಲೆ ಗಾಯಕರು ಇದೇ ವೇದಿಕೆಯ ಕೊಡುಗೆಗಳು.

ಆಕಾಶಕ್ಕೆ ಹೇಗೆ ಅಂಚಿಲ್ಲವೋ ಹಾಗೆ, ಬಾಲು ಅವರ ಹಾಡುಗಳ ಸಂಖ್ಯೆಗೆ ಕೊನೆಯೆ ಇಲ್ಲ. ಭಕ್ತಿಗೀತೆಗಳಿರಲಿ, ಜಾನಪದವಿರಲಿ ಯಾವುದೇ ಕಾರ್ಯಕ್ರಮ ಮೂಡಿ ಬಂದರೂ ಎಸ್ಪಿಬಿಯಿಂದ ಆರಂಭವಾಗಿ ಅವರೊಂದಿಗೆ ಕೊನೆಯಾಗಬೇಕು.

ಹುಬ್ಬಳ್ಳಿಯಲ್ಲಿ ಜನವರಿ 2018 ಜನವರಿ 26 ರಂದು ಎಂ ಎಂ ಜೋಷಿ ನೇತ್ರಾಲಯದ ಸ್ವರ್ಣಮಹೋತ್ಸವದಲ್ಲಿ ಕಾರ್ಯಕ್ರದಲ್ಲಿ ಪಾಲ್ಗೊಳ್ಳಲು ಅವರು ಹುಬ್ಬಳ್ಳಿಗೆ ಬಂದಿದ್ದು ಬಹುಶಃ ಕೊನೆಯಾಯಿತು. ಅಂದಿನ ಅವರ ಸಂಗೀತ ರಸದೌತಣ ಸವಿದವರಲ್ಲಿ ನಾನೂ ಒಬ್ಬನಾಗಿದ್ದೆ.

ಸಂಗೀತ ಸಾಮ್ರಾಟನಿಗೆ ಪಬ್ಲಿಕ್ ನೆಕ್ಸ್ಟ್ ಓದುಗರ ಪರವಾಗಿ ಸ್ವರಾಂಜಲಿ

Edited By : Nagesh Gaonkar
PublicNext

PublicNext

25/09/2020 03:14 pm

Cinque Terre

91.86 K

Cinque Terre

8

ಸಂಬಂಧಿತ ಸುದ್ದಿ