ಇಸ್ಲಾಮಾಬಾದ್: ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಘೋಟ್ಕಿ ಜಿಲ್ಲೆಯಲ್ಲಿ ಪೊಲೀಸ್ ಒಬ್ಬರು ತಮ್ಮ ಮಕ್ಕಳನ್ನು 50,000 ರೂ.ಗೆ ಮಾರಾಟಕ್ಕೆ ಯತ್ನಿಸಿದ ಕರುಳು ಹಿಂಡುವ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾರಾಗೃಹ ಇಲಾಖೆಯ ಪೊಲೀಸ್ ನಿಸಾರ್ ಲಶಾರಿ ಅವರು ರಸ್ತೆಯ ಮಧ್ಯದಲ್ಲಿ ಕಿರಿಯ ಮಗನನ್ನು ತನ್ನ ಮಡಿಲಲ್ಲಿ ಎತ್ತಿಕೊಂಡು 50,000 ರೂ.ಗೆ ಮಾರುತ್ತಿರುವುದಾಗಿ ಕೂಗಿ ಜನರನ್ನು ಕರೆದಿದ್ದಾರೆ. ಅಷ್ಟಕ್ಕೂ ನಿಸಾರ್ ಲಶಾರಿ ಅವರ ಈ ನಿರ್ಧಾರಕ್ಕೆ ಕಾರಣ ಏನು ಗೊತ್ತಾ?
ಮಗನ ವೈದ್ಯಕೀಯ ಚಿಕಿತ್ಸೆಗಾಗಿ ಲಶಾರಿ ರಜೆ ಕೇಳಿದ್ದರು. ಆದರೆ ಮೇಲಧಿಕಾರಿ ರಜೆ ಕೊಡಲು ಲಂಚ ಕೇಳಿದ್ದ. ಲಶಾರಿ ಅವರಿಗೆ ಲಂಚ ಕೊಡಲು ಸಾಧ್ಯವಾಗದಿದ್ದಾಗ ಅವರ ರಜೆಯನ್ನು ರದ್ದುಪಡಿಸಿ ನಗರದಿಂದ 120 ಕಿ.ಮೀ ದೂರದಲ್ಲಿರುವ ಲರ್ಕಾನಾಗೆ ವರ್ಗಾವಣೆ ಮಾಡಲಾಗಿತ್ತು. ಇದರಿಂದಾಗಿ ಲಶಾರಿ ರಸ್ತೆ ಮಧ್ಯದಲ್ಲಿ ಮಕ್ಕಳನ್ನು ಮಾರಾಟ ಮಾಡುವ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ವೀಡಿಯೋ ವೈರಲ್ ಆಗಿದ್ದು, ತಂದೆಯ ಅಸಹಾಯಕತೆಯನ್ನು ಕಂಡು ನೆಟ್ಟಿಗರು ಎದೆಗುಂದಿದ್ದಾರೆ. ಒಬ್ಬ ವೀಕ್ಷಕರು, ಈ ವಿಡಿಯೋ ನೋಡಿ ತುಂಬಾ ದುಃಖವಾಗಿದೆ. ಅವರು ಅಸಹಾಯಕತೆಯಲ್ಲಿ ಏನು ಮಾಡುತ್ತಿದ್ದಾರೆ? ಎಂದು ಕಮೆಂಟ್ ಮಾಡಿದ್ದಾರೆ.
PublicNext
18/11/2021 01:05 pm