ಕಾಬೂಲ್: ಅಫ್ಘಾನಿಸ್ತಾನವು ತಾಲಿಬಾನ್ ವಶವಾದಾಗಿನಿಂದಲೂ ಅಲ್ಲಿನ ಜನರು ಭಯದ ನಡುವೆ ಜೀವನ ನಡೆಸುತ್ತಿದ್ದಾರೆ. ಇತ್ತ ವಿದೇಶಗಳಿಗೆ ತೆರಳಿ ಆಶ್ರಯ ಪಡೆದುಕೊಳ್ಳುವ ಉದ್ದೇಶದಿಂದ ವಿಮಾನ ನಿಲ್ದಾಣಕ್ಕೆ ಬಂದಿದ್ದ ಮಹಿಳೆಯರು ವಿಮಾನ ಹತ್ತಲು ಅವಕಾಶ ಸಿಗುವುದಿಲ್ಲ ಎಂದು ಖಚಿತವಾದಾಗ ಮಕ್ಕಳನ್ನು ಬ್ರಿಟಿಷ್ ಮತ್ತು ಅಮೆರಿಕ ಯೋಧರತ್ತ ಎಸೆದು ವಾಪಸ್ ಹೋಗುತ್ತಿದ್ದಾರೆ. ಈ ಹೃದಯವಿದ್ರಾವಕ ಘಟನೆ ಬ್ರಿಟನ್ ರಾಜಧಾನಿ ಲಂಡನ್ನಲ್ಲಿ ರಕ್ಷಣಾ ಇಲಾಖೆಯ ಉನ್ನತ ವಲಯದ ಮನಕಲಕುವಂತೆ ಮಾಡಿದೆ.
ಹುಟ್ಟಿಬೆಳೆದ ದೇಶದಲ್ಲಿ ಬಾಳುವುದು ಬೇಡ, ಬೇರೆಲ್ಲಾದರೂ ಆಶ್ರಯ ಪಡೆಯೋಣ ಎಂಬ ನಿರ್ಧಾರಕ್ಕೆ ಅಲ್ಲಿನ ಜನರು, ಮುಖ್ಯವಾಗಿ ಮಹಿಳೆಯರು ಬಂದಿದ್ದಾರೆ. ವಿಮಾನ ನಿಲ್ದಾಣಕ್ಕೆ ಬಂದು, ವಿವಿಧ ದೇಶಗಳಿಗೆ ತೆರಳಲು ಯತ್ನಿಸುತ್ತಿರುವ ಈ ಕುಟುಂಬಗಳಲ್ಲಿ ಹಲವರಿಗೆ ದಾಖಲೆಗಳ ಕೊರತೆ ಕಾರಣ ಪಾಶ್ಚಿಮಾತ್ಯ ದೇಶಗಳಿಗೆ ತೆರಳಲು ಅವಕಾಶ ಸಿಗುತ್ತಿಲ್ಲ. ಇಂಥವರು ವಾಪಸ್ ಮನೆಗಳಿಗೆ ಹೋಗುವ ಮೊದಲು ಮಕ್ಕಳನ್ನು ಅಲ್ಲಿಯೇ ಇರುವ ಸೈನಿಕರಿಗೆ ಕೊಟ್ಟು, ಚೆನ್ನಾಗಿ ಬೆಳೆಸುವಂತೆ ಹೇಳುತ್ತಿದ್ದಾರೆ.
ಪಾಲಕರಿಲ್ಲದ ಪುಟ್ಟ ಮಕ್ಕಳನ್ನು ಸ್ವೀಕರಿಸುವುದಿಲ್ಲ ಎಂದು ಯೋಧರು ವಾಪಸ್ ಕೊಟ್ಟರೆ, ಅಲ್ಲಿನ ಮುಳ್ಳುತಂತಿ ಬೇಲಿಯಿಂದಾಚೆಗೆ ಮಕ್ಕಳನ್ನು ಕಳಿಸಲು ಯತ್ನಿಸುತ್ತಿದ್ದಾರೆ. ಕೆಲವರು ಎಸೆಯುತ್ತಿದ್ದಾರೆ. ಈ ಪ್ರಯತ್ನದಲ್ಲಿ ಎಷ್ಟೋ ಮಕ್ಕಳು ಮುಳ್ಳುತಂತಿಗೆ ಸಿಲುಕಿ, ಚರ್ಮ ಹರಿದುಕೊಂಡಿದ್ದಾರೆ. ಅಳು ಕೇಳಲಾಗದ ಬ್ರಿಟಿಷ್ ಯೋಧರು ಮಕ್ಕಳನ್ನು ಸಂತೈಸಲೇಬೇಕಾದ ಅನಿವಾರ್ಯತೆಗೆ ಸಿಲುಕಿದಿದ್ದಾರೆ.
ಈಗ ಇಂಥ ಮಕ್ಕಳನ್ನು ಬ್ರಿಟನ್ಗೆ ಕರೆದೊಯ್ಯುವುದು ಹೇಗೆಂಬ ಪ್ರಶ್ನೆ ಅಲ್ಲಿನ ಆಡಳಿತವನ್ನು ಬಾಧಿಸುತ್ತಿದೆ. ರಾಯಿಟರ್ಸ್ ಸುದ್ದಿಸಂಸ್ಥೆಯು ಬಿಡುಗಡೆ ಮಾಡಿದ್ದ ವಿಡಿಯೊ ತುಣುಕಿನಲ್ಲಿ ಅಫ್ಘಾನ್ ಕುಟುಂಬವೊಂದರ ದಾಖಲೆಗಳನ್ನು ಪರಿಶೀಲಿಸುವ ಬ್ರಿಟಿಷ್ ಯೋಧರು, ಆ ಕುಟುಂಬದ ಮಕ್ಕಳನ್ನು ಎತ್ತಿಕೊಂಡು ವಿಮಾನ ನಿಲ್ದಾಣ ಪ್ರವೇಶಿಸಲು ಅವಕಾಶ ಕೊಡುತ್ತಾರೆ. ಆ ಮಗುವಿನ ಪರಿಸ್ಥಿತಿ ಮುಂದೆ ಏನಾಯ್ತು ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗುತ್ತಿಲ್ಲ.
PublicNext
19/08/2021 08:05 pm