ದಾವಣಗೆರೆ: ಉಕ್ರೇನ್ ಗೆ ವಿದ್ಯಾಭ್ಯಾಸಕ್ಕೆಂದು ದಾವಣಗೆರೆಯ ನಾಲ್ಕು ವಿದ್ಯಾರ್ಥಿಗಳು ತೆರಳಿದ್ದಾರೆ. ಸದ್ಯ ಉಕ್ರೇನ್ ನಲ್ಲಿ ಯುದ್ಧದ ಕಾರ್ಮೋಡ ಕವಿದಿದೆ. ಅಲ್ಲಿರುವ ನಮ್ಮ ಮಕ್ಕಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತನ್ನಿ ಎಂದು ಪೋಷಕರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಸದ್ಯ ಅಲ್ಲಿರುವ ವಿದ್ಯಾರ್ಥಿಗಳು ನಾವು ಸೇಫ್ ಆಗಿದ್ದೇವೆ ಎಂದು ಮಾಹಿತಿ ಕೊಟ್ಟಿದ್ದಾರೆ. ನಗರದ ಕೆಟಿಜೆ ನಗರದ ಅಂಜುಮನ್ ಶಾಲೆ ಬಳಿಯ ವಾಸಿ ಉಪನ್ಯಾಸಕ ಶೌಖತ್ ಅಲಿ ಎಂಬುವವರ ಪುತ್ರ ಮಹ್ಮದ್ ಅಬೀದ್ ಅಲಿ, ವಿದ್ಯಾರ್ಥಿನಿಯರಾದ ಹಬೀಬಾ, ಮಿಸ್ಬಾ ಹಾಗೂ ಹರಿಹರದ ಸುತನ್ ಎಂಬುವವರು ಉಕ್ರೇನ್ ನಲ್ಲಿರುವ ವಿದ್ಯಾರ್ಥಿಗಳು.
ಉಕ್ರೇನ್ ಪರಿಸ್ಥಿತಿ ನೋಡಿ ಕಳೆದ ತಿಂಗಳೇ ಮಗನನ್ನ ಕರೆತರುವ ಯೋಜನೆ ಇತ್ತು. ಆದ್ರೆ ವಿಶ್ವವಿದ್ಯಾಲಯದವರು ನಮಗೆ ಏನು ಆಗಲ್ಲ ಎಂಬ ಭರವಸೆ ನೀಡಿದ್ದರು. ಹಾಗಾಗಿ ಸುಮ್ಮನಾಗಿದ್ದೆವು. ಫೆ.23 ರಂದು ವಿವಿಯವರು ಯಾರು ಹೋಗುವರು ಹೋಗಬಹುದು ಎಂದು ಹೇಳಿದ್ದಾರೆ. ನಾಳೆ 25ಕ್ಕೆ ಟಿಕೇಟ್ ಬುಕ್ ಆಗಿತ್ತು. ಆದ್ರೆ ಪರಿಸ್ಥಿತಿ ಹೀಗಾಗಿದೆ ಎಂದು ಮಹ್ಮದ್ ಅಬೀಬ್ ಅಲಿ ತಂದೆ ಶೌಖತ್ ಅಲಿ ತಿಳಿಸಿದ್ದಾರೆ.
ಸದ್ಯಕ್ಕೆ ಆತಂಕ ಪಡುವ ಅಗತ್ಯವಿಲ್ಲ. ಮಗ ಸುರಕ್ಷಿತವಾಗಿ ಮನೆಗೆ ಬರುತ್ತಾನೆ ಎಂಬ ವಿಶ್ವಾಸವಿದೆ. ವಿದೇಶಾಂಗ ಇಲಾಖೆ ಈ ವಿಚಾರದಲ್ಲಿ ಗಮನ ಹರಿಸಬೇಕಿದೆ ಎಂದಿದ್ದಾರೆ.
PublicNext
24/02/2022 07:22 pm