ಲಕ್ನೋ: ಸಂಕಷ್ಟದ ಸಮಯದಲ್ಲಿ ಯಾರು ಬೇಕಾದರೂ ನಮ್ಮ ಕೈಬಿಡಬಹುದು. ಆದರೆ ತಾಯಿ ಮಾತ್ರ ಎಂತಹ ಪರಿಸ್ಥಿಯಲ್ಲೂ ನಮ್ಮನ್ನ ಬಿಟ್ಟುಕೊಡುವುದಿಲ್ಲ. ಆದರೆ ಉತ್ತರ ಪ್ರದೇಶದ ಕಂದಮ್ಮನ ಜೀವನದಲ್ಲಿ ಇದು ಸುಳ್ಳು ಎನ್ನುವಂತಾಗಿದೆ.
ಹೌದು. ಮುಜಾಫರ್‌ನಗರದಲ್ಲಿ ಹದಿನೈದು ದಿನಗಳ ಹಿಂದೆ ಮುಚ್ಚಿದ ಅಂಗಡಿಯ ಹೊರಗೆ ಪುಟ್ಟ ಬಾಲಕನೊಬ್ಬ ಚಾಪೆಯ ಮೇಲೆ ಮಲಗಿದ್ದ. ಈ ದೃಶ್ಯವನ್ನು ಯಾರೋ ತಮ್ಮ ಕ್ಯಾಮೆರಾದಲ್ಲಿ ಕ್ಲಿಕ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಈ ಫೋಟೋ ವೈರಲ್ ಆಗುತ್ತಿದ್ದಂತೆ ಮುಜಾಫರ್‌ನಗರದ ಆಡಳಿತವು ಬಾಲಕನನ್ನು ಪತ್ತೆಹಚ್ಚಲು ಪ್ರಯತ್ನಿಸಿತ್ತು. ಸೋಮವಾರ ಬೆಳಿಗ್ಗೆ ಬಾಲಕನನ್ನು ರಕ್ಷಿಸಲಾಗಿದೆ.
ಬಾಲಕನ ಕಥೆ ಮನಕಲಕುವಂತಿದೆ. 9ರಿಂದ 10 ವರ್ಷ ಅಂಕಿತ್ ಮೂಲದ ಬಗ್ಗೆ ಇನ್ನೂ ತಿಳಿದುಬಂದಿಲ್ಲ. ಆದರೆ ಪ್ರಾಥಮಿಕ ಮಾಹಿತಿ ಪ್ರಕಾರ, ಅಂಕಿತ್ ತಂದೆ ಪ್ರಕರಣವೊಂದರ ಹಿನ್ನೆಲೆಯಲ್ಲಿ ಜೈಲು ಸೇರಿದ್ದಾನೆ. ಆರೈಕೆ ಜವಾಬ್ದಾರಿ ಹೊರಬೇಕಿದ್ದ ತಾಯಿ ಮಗನನ್ನು ಬಿಟ್ಟು ಹೋಗಿದ್ದಾಳೆ. ಹೀಗಾಗಿ ಬೀದಿಗೆ ಬಿದ್ದ ಬಾಲಕನಿಗೆ ಸಾಥ್ ನೀಡಿದ್ದು ಆತ ಸಾಕು ನಾಯಿ ಡ್ಯಾನಿ.
ಅಂಕಿತ್ ಬಲೂನ್‌ಗಳನ್ನು ಮಾರಾಟ ಅಥವಾ ಟೀ ಸ್ಟಾಲ್‌ಗಳಲ್ಲಿ ಕೆಲಸ ಮಾಡುವ ಮೂಲಕ ಬದುಕುಳಿಯುತ್ತಿದ್ದ. ಅವನು ತನ್ನ ಏಕೈಕ ಸ್ನೇಹಿತ ಡ್ಯಾನಿ ಎಂಬ ನಾಯಿಯೊಂದಿಗೆ ಫುಟ್‌ಪಾತ್‌ಗಳಲ್ಲಿ ಮಲಗುತ್ತಿದ್ದ. ಡ್ಯಾನಿ ಕೂಡ ತನ್ನ ಮಾಲೀಕನನ್ನು ಬಿಟ್ಟು ಎಲ್ಲೂ ಹೋಗುತ್ತಿರಲಿಲ್ಲ. ಕಳೆದ ಹಲವಾರು ವರ್ಷಗಳಿಂದ ಅಂಕಿತ್‌ಗೆ ಜೀವನ ಹೀಗಿತ್ತು. ಅಂಕಿತ್ ದಿನದ ಸಂಪಾದನೆಯಲ್ಲಿ ತನಗೆ ಹಾಗೂ ಡ್ಯಾನಿಗೆ ಆಹಾರವನ್ನು ಖರೀದಿಸುತ್ತಿದ್ದ.
ಬಾಲಕ ಅಂಕಿತ್ ಕೆಲವೊಮ್ಮೆ ಕೆಲಸ ಮಾಡುತ್ತಿದ್ದ ಟೀ ಸ್ಟಾಲ್ ಮಾಲೀಕರ ಪ್ರಕಾರ, ''ಅಂಕಿತ್ ನಾಯಿ ಎಂದಿಗೂ ಆತನನ್ನು ಬಿಟ್ಟು ಇರುತ್ತಿರಲಿಲ್ಲ. ಹುಡುಗ ಇಲ್ಲಿ ಕೆಲಸ ಮಾಡುವವರೆಗೂ ನಾಯಿ ಒಂದು ಮೂಲೆಯಲ್ಲಿ ಕುಳಿತುಕೊಳ್ಳುತ್ತಿತ್ತು. ಅಂಕಿತ್ ಸ್ವಾಭಿಮಾನಿ, ಎಂದಿಗೂ ಉಚಿತವಾಗಿ ಏನನ್ನೂ ತೆಗೆದುಕೊಳ್ಳುತ್ತಿರಲಿಲ್ಲ, ತನ್ನ ನಾಯಿಗೂ ಹಾಲು ಕೂಡ ತೆಗೆದುಕೊಳ್ಳುತ್ತಿರಲಿಲ್ಲ” ಎಂದು ಹೇಳಿದ್ದಾರೆ.
ಮುಜಾಫರ್‌ನಗರದ ಪೊಲೀಸ್ ಅಧಿಕಾರಿ ಅಭಿಷೇಕ್ ಯಾದವ್ ಮಾತನಾಡಿ, ''ಈಗ ಅಂಕಿತ್ ಮುಜಾಫರ್‌ನಗರ ಪೊಲೀಸರ ಆರೈಕೆಯಲ್ಲಿದ್ದಾನೆ. ನಾವು ಆತನ ಸಂಬಂಧಿಕರನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಆತನ ಫೋಟೋವನ್ನು ನೆರೆಯ ಜಿಲ್ಲೆಗಳ ವಿವಿಧ ಪೊಲೀಸ್ ಠಾಣೆಗಳಿಗೆ ಕಳುಹಿಸಲಾಗಿದೆ. ಈ ಸಂಬಂಧ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೂ ತಿಳಿಸಿದ್ದೇವೆ'' ಎಂದು ತಿಳಿಸಿದ್ದಾರೆ.
PublicNext
15/12/2020 08:25 pm