ಬರುವ ಕಷ್ಟಗಳಿಗೆ ಎದೆಗುಂದದೆ, ಮಹಾ ಟೀಕಾಕಾರರ ಟೀಕೆಗಳಿಗೆ ತಲೆ ಕೆಡಿಸಿಕೊಳ್ಳದೆ ಮುಂದೆ ಸಾಗಿದರೆ ಗೆದ್ದೇ ಗೆಲ್ಲುತ್ತೇವೆ. ಇಲ್ಲವೇ ಪಕ್ವ ಅನುಭವ ಪಡೆದುಕೊಳ್ಳುತ್ತೇವೆ.
ಹೀಗೆ ಎಲ್ಲವನ್ನೂ ಎದುರಿಸಿ ಮಾದರಿಯಾದ ಅನೇಕರ ಬಗ್ಗೆ ಕೇಳಿದ್ದೇವೆ, ಮಾತನಾಡಿದ್ದೇವೆ. ಅಂತೆಯೇ ಈಗ ಮುಂಬೈ ಬಿರಿಯಾನಿ ವಾಲಾ ಬಗ್ಗೆ ಇಂದು ಮಹಾರಾಷ್ಟ್ರ ಅಷ್ಟೇ ಅಲ್ಲ, ಇಡೀ ದೇಶವೇ ಮಾತನಾಡುತ್ತಿದೆ. ಹಾಗಾದ್ರೆ ಅವರು ನಡೆದು ಬಂದ ಪರಿಶ್ರಮದ ಹಾದಿಯನ್ನು ಒಮ್ಮೆ ಅವಲೋಕಿಸೋಣ. ನಿಮಗೂ ಅವರ ಬದುಕು ಸ್ಫೂರ್ತಿಯಾಗುತ್ತೆ.
ಸಾಧಕ ಅಕ್ಷಯ್ ಪಾರ್ಕರ್ ಸದ್ಯ ಮುಂಬೈ ಬಿರಿಯಾನಿ ವಾಲಾ ಎಂದೇ ಫುಲ್ ಫೇಮಸ್ ಆಗಿದ್ದಾರೆ.5 ಸ್ಟಾರ್ ಅಂತಾರಾಷ್ಟ್ರೀಯ ಕ್ರೂಸ್ ಬಾಣಸಿಗರಾಗಿದ್ದ ಅಕ್ಷಯ್ ಕೆಲಸ ಕಳೆದುಕೊಂಡರು. ಇದೊಂದು ರೀತಿ ಪ್ರತಿಭೆಯ ಅನಾವರಣಕ್ಕೆ ವೇದಿಕೆಯಾಯಿತು ಎಂದರೆ ತಪ್ಪಾಗದು. ಅದರಲ್ಲೂ ಅಕ್ಷಯ್ ಪಾರ್ಕರ್ ಹೋರಾಟ ಇಂದು ಫಲ ಕೊಟ್ಟಿದೆ.
ದೇಶದ ಪ್ರಸಿದ್ಧ ತಾಜ್ ಹೋಟೆಲ್‌ನಲ್ಲಿ ಅಪ್ರೆಂಟಿಸ್ ಮಾಡಿದ ಅಕ್ಷಯ್, ಬಳಿಕ ಅಂತಾರಾಷ್ಟ್ರೀಯ ಕ್ರೂಸ್‌ನಲ್ಲಿ ಬಾಣಸಿಗರಾಗಿ ಕೆಲಸ ಮಾಡಿದರು. ಆದರೆ, ಇದೇ ವರ್ಷ ಮಾರ್ಚ್ ವರೆಗೂ ಅವರಿಗೆ ವೇತನ ಬರುತ್ತಿತ್ತು. ಆದರೆ, ಕೊರೊನಾ ಹಿನ್ನೆಲೆಯಲ್ಲಿ ಜೂನ್‌ನಲ್ಲಿ ಕಂಪನಿ ಅವರನ್ನು ಕೈ ಬಿಟ್ಟು ಬಿಡ್ತು.
ಈ ಸಮಯದಲ್ಲಿ ಎಲ್ಲಿ ಹೋಗುವುದು, ಏನು ಮಾಡಬೇಕು? ಎಂಬ ಚಿಂತೆ ಅಕ್ಷಯ್ ಅವರನ್ನು ಕಾಡಿತ್ತು. ಸ್ಥಳೀಯ ಹೋಟೆಲ್‌ಗಳಲ್ಲಿ ಕೆಲಸಕ್ಕೆ ಹೋದರೆ ವೇತನವೂ ಕಡಿಮೆ. ಹೀಗಾಗಿ ಜೀವನ ನಿರ್ವಹಣೆ ಭಾರೀ ಕಷ್ಟವಾಗಿತ್ತು. ಆಗ ಅವರಿಗೆ ಹೊಳೆದಿದ್ದೇ ಬಿರಿಯಾನಿ ಸ್ಟಾಲ್ ಐಡಿಯಾ.
ಪಾರ್ಕರ್ ಬಿರಿಯಾನಿ ಸೆಂಟರ್ ಆರಂಭಿಸಿದ ಅಕ್ಷಯ್, ಆರಂಭದಲ್ಲಿ ನಷ್ಟವನ್ನೇ ಅನುಭವಿಸಿದರು. ಇಂತಹ ಕಷ್ಟದ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಅಕ್ಷಯ್ ಕೈ ಹಿಡಿಯಿತು.
ಕೆಲ ಸ್ನೇಹಿತರು, ಗ್ರಾಹಕರು ಬಿರಿಯಾನಿ ಸೇವಿಸಿ ಅದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡರು. ಅಷ್ಟೇ ಅಲ್ಲದೆ, ಪತ್ರಿಕೆಗಳಲ್ಲೂ ಪಾರ್ಕರ್ ಬಿರಿಯಾನಿ ಬಗ್ಗೆ ಲೇಖನಗಳು ಬಂದವು. ಇದರಿಂದಾಗಿ ಪಾರ್ಕರ್ ಬಿರಿಯಾನಿ ಮುಂಬೈ ಜನತೆಗೆ ಪರಿಚಯವಾಯಿತು.
ಸದ್ಯ, ಅಕ್ಷಯ್ ಅವರ ಪಾರ್ಕರ್ ಬಿರಿಯಾನಿ ಸ್ಟಾಲ್ ಮುಂದೆ ಕಿಲೋ ಮೀಟರ್‌ಗಟ್ಟಲೆ ಗ್ರಾಹಕರು ಕ್ಯೂ ನಿಲ್ಲುತ್ತಿದ್ದಾರೆ. ಕೆಲವರು ಫೋನ್ ಮಾಡಿ ನೂರಾರು ಆರ್ಡರ್‌ಗಳನ್ನು ಬುಕ್ ಮಾಡುತ್ತಾರೆ.
ಹೀಗೆ ನಡೆದು ಬಂದ ಅಕ್ಷಯ್ ಒಂದು ಮಾತು ಹೇಳ್ತಾರೆ 'ಅಂದಿನ ನನ್ನ ಶ್ರಮ, ಶ್ರದ್ಧೆ ಇಂದು ಫಲಕೊಟ್ಟಿದೆ. ಎದ್ದೇಳು ಕೆಲಸ ಮಾಡು... ಎನ್ನುತ್ತಿದ್ದ ಮನೆಯವರು ಇಂದು ಕೊಂಚ ವಿಶ್ರಾಂತಿ ತೆಗೆದುಕೋ ಎನ್ನುತ್ತಾರೆ'.
ಪ್ರತಿ ಸಾಧಕರ ಹಿಂದೆ ಶ್ರಮ, ಶ್ರದ್ಧೆ ಹಾಗೂ ತಾಳ್ಮೆಯ ಹೆಜ್ಜೆ ಗುರುತು ಇದ್ದೇ ಇರುತ್ತವೆ. ಅಕ್ಷಯ್ ಪಾರ್ಕರ್ ಅವರಂತೆ ಬೆಳೆಯಬೇಕು ಎನ್ನುವ ಯುವಕರಿಗೆ ನಾವು- ನೀವು ಪ್ರೇರಣೆ ನೀಡೋಣ... ಯುವ ಶಕ್ತಿ ದೇಶವನ್ನು ಉತ್ತುಂಗಕ್ಕೆ ಕೊಂಡೊಯ್ಯಲಿ.
PublicNext
15/12/2020 04:08 pm