ಪಬ್ಲಿಕ್ ನೆಕ್ಸ್ಟ್ ವಿಶೇಷ: ಪ್ರವೀಣ ಓಂಕಾರಿ
ಸಾವಳಗಿ: ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ ಯಾವತ್ತಿದ್ದರೂ ಫಲ ಕೊಟ್ಟೇ ಕೊಡುತ್ತದೆ ಎಂಬ ಮಾತಿದೆ. ಹಾಗೆಯೇ ದ್ರಾಕ್ಷಿ ಬೆಳೆ ನಂಬಿ ಅದರಲ್ಲಿ ಯಶಸ್ಸು ಸಾಧಿಸಿದ ರೈತನ ಕಥೆ ಇದು.
ನೀವು ದೃಶ್ಯಗಳಲ್ಲಿ ನೋಡುತ್ತಿರುವ ರೈತನ ಹೆಸರು ಅಂಬಣ್ಣ ಯಕ್ಸಂಬಿ. ಇವರು ಮೂಲತಃ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದವರು. ತಮ್ಮ ಮೂರು ಎಕರೆ ಜಮೀನಿನಲ್ಲಿ ಸಾರ್ಥಕ ದ್ರಾಕ್ಷಿ ಕೃಷಿ ಮಾಡುತ್ತಿದ್ದಾರೆ.
ಬೇಸಿಗೆ ಸಂದರ್ಭದಲ್ಲಿ ಹೆಚ್ಚು ಮಾರಾಟವಾಗುವ ದ್ರಾಕ್ಷಿ ಹಣ್ಣು ಒಂದು ಟನ್‌ಗೆ ಅಂದಾಜು 55 ರಿಂದ 60 ಸಾವಿರಕ್ಕೆ ಮಾರಾಟವಾಗುತ್ತದೆ. ತಮ್ಮ ಸ್ವಂತ ಜಮೀನಿನಲ್ಲಿ ಅಂಬಣ್ಣ ಅವರು ಪ್ರತಿವರ್ಷಕ್ಕೆ 6 ಟನ್ ದ್ರಾಕ್ಷಿ ಬೆಳೆದು ಮೂರುವರೆ ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.
ದ್ರಾಕ್ಷಿ ಕಟಾವಿಗೆ ಬರುವವರೆಗೂ ಅದನ್ನು ಜೋಪಾನವಾಗಿ ನೋಡಿಕೊಂಡು ಬರಬೇಕು. ಕ್ರಿಮಿನಾಶಕ, ಕಳೆ ತೆಗೆಸುವುದು ಸೇರಿದಂತೆ ಅನೇಕ ರೀತಿಯಲ್ಲಿ ಅದನ್ನು ಜೋಪಾನ ಮಾಡಬೇಕು. ವರ್ಷಕ್ಕೆ ಒಮ್ಮೆ ದ್ರಾಕ್ಷಿ ಕಟಾವು ಮಾಡಿದರೂ ಅದರಲ್ಲಿ ಲಾಭ ಗಳಿಸುತ್ತಿದ್ದೇನೆ ಎನ್ನುತ್ತಾರೆ ಅಂಬಣ್ಣ.
ಬಾಗಲಕೋಟೆ ಜಿಲ್ಲೆಯಾದ್ಯಂತ ದ್ರಾಕ್ಷಿ ಹಾಗೂ ದಾಳಿಂಬೆ ಹಣ್ಣಿನ ಕೃಷಿ ಹೆಚ್ಚಾಗಿರುತ್ತದೆ. ಸಾವಳಗಿಯಲ್ಲೂ ದ್ರಾಕ್ಷಿ ಬೆಳೆಗಾರರಿದ್ದು, ಕಡಿಮೆ ಜಮೀನಿನಲ್ಲಿ ದ್ರಾಕ್ಷಿ ಬೆಳೆದು ಅದರಲ್ಲಿ ಲಾಭ ಗಳಿಸುತ್ತಿರುವ ರೈತರಲ್ಲಿ ಅಂಬಣ್ಣ ಕೂಡ ಒಬ್ಬರು.
ಹವಾಮಾನ ಆಧಾರಿತ ಪ್ರದೇಶದಲ್ಲಿ ದ್ರಾಕ್ಷಿ ಬೆಳೆ ಚೆನ್ನಾಗಿ ಬರುತ್ತದೆ. ಎಲ್ಲಾ ಪ್ರದೇಶದಲ್ಲೂ ಅದು ಬರುವುದಿಲ್ಲ. ಈಗ ದ್ರಾಕ್ಷಿ ಹೂವು, ಮಿಡಿ ಕುಳಿತುಕೊಂಡಿದ್ದು, 125 ದಿನಕ್ಕೆ ಅದು ಕಟಾವಿಗೆ ಬರಲಿದೆ. ಆನಂತರ ಬಳ್ಳಿಯನ್ನು ಕಟಾವು ಮಾಡಿ ಮತ್ತೆ ಅದು ಚಿಗಿಯಲು ಬಿಡಲಾಗುತ್ತದೆ. ಹೀಗೆ ದ್ರಾಕ್ಷಿ ಕೃಷಿಯಲ್ಲಿ ಖುಷಿ ಕಾಣುತ್ತಿದ್ದಾರೆ ಅಂಬಣ್ಣ.
-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಸಾವಳಗಿ
PublicNext
24/10/2021 11:41 am