ಸಿಡ್ನಿ: ದೈತ್ಯ ಹೆಬ್ಬಾವು ಸುತ್ತಿಕೊಂಡು ಒದ್ದಾಡುತ್ತಿದ್ದ ಮಹಿಳೆಯನ್ನು ಪೊಲೀಸರು ರಕ್ಷಣೆ ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೌದು. ಆಸ್ಟ್ರೇಲಿಯಾದ ಕ್ವೀನ್ಸ್ಲ್ಯಾಂಡ್ನ ದಕ್ಷಿಣ ಭಾಗದಲ್ಲಿರುವ ಬ್ರಿಸ್ಬೇನ್ನ ಸ್ಯಾಮ್ಫೋರ್ಡ್ ವ್ಯಾಲಿಯಲ್ಲಿ ಮಹಿಳೆಯ ಕಾಲಿಗೆ ಹೆಬ್ಬಾವು ಸುತ್ತಿಕೊಂಡಿತ್ತು. ತಕ್ಷಣವೇ ಮಹಿಳೆ , ‘ನನ್ನ ಕಾಲಿಗೆ ಹೆಬ್ಬಾವೊಂದು ಸುತ್ತಿಕೊಂಡಿದೆ. ಬಿಡಿಸಲು ನಿಮ್ಮ ನೆರವು ಬೇಕು’ ಎಂದು ಸ್ಥಳೀಯ ಪೊಲೀಸರಿಗೆ ತುರ್ತುಕರೆಯ ಸಂದೇಶವನ್ನು ಕಳುಹಿಸಿದ್ದರು.
ತುರ್ತುಕರೆಗೆ ಇಬ್ಬರು ಅಧಿಕಾರಿಗಳು ಕೂಡಲೆ ಸ್ಪಂದಿಸಿ, ತಕ್ಷಣವೇ ಕಾರಿನಲ್ಲಿ ಸ್ಥಳಕ್ಕೆ ಧಾವಿಸಿದ್ದರು. ಅಲ್ಲಿ ನೋಡಿದರೆ 2-3 ಮೀಟರ್ ಉದ್ದದ ಹೆಬ್ಬಾವು ಮಹಿಳೆಯ ಬಲಗಾಲಿಗೆ ಬಿಗಿಯಾಗಿ ಸುತ್ತುಹಾಕಿಕೊಂಡಿತ್ತು. ಓರ್ವ ಮಹಿಳಾ ಪೊಲೀಸ್ ಅಧಿಕಾರಿ ಹೇಗಿದ್ದೀರಿ? ಎಲ್ಲವೂ ಒಕೆ ಅಲ್ಲವೇ ಎಂದು ಪ್ರಶ್ನಿಸುತ್ತಾ ಮಹಿಳೆ ಬಳಿಗೆ ತೆರಳಿದರು. ಈ ವೇಳೆ ಮಹಿಳೆ ಹಾವಿನ ತಲೆಯನ್ನು ಹಿಡಿದೆತ್ತಿದರೆ, ಅಧಿಕಾರಿ ನಿಧಾನವಾಗಿ ಆಕೆಯ ಕಾಲಿಗೆ ಸುತ್ತು ಹಾಕಿದ್ದ ಹೆಬ್ಬಾವನ್ನು ಬಿಡಿಸತೊಡಗಿದರು.
ಬಳಿಕ ಕೈಗೆ ಸಿಕ್ಕ ಹೆಬ್ಬಾವನ್ನು ಮಹಿಳೆ ಮನೆ ಸಮೀಪದ ಪೊದೆಯಲ್ಲಿ ಬಿಟ್ಟರು. ಈ ದೃಶ್ಯವನ್ನು ಸೆರೆ ಹಿಡಿದ ಕ್ವೀನ್ಸ್ ಲ್ಯಾಂಡ್ ಪೊಲೀಸರು ವಿಡಿಯೋವನ್ನು ತಮ್ಮ ಫೇಸ್ಬುಕ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ತಮ್ಮದೆ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.
PublicNext
19/10/2020 08:02 pm