ಧಾರವಾಡ: ಧಾರವಾಡದಿಂದ ಕೂಗಳತೆ ದೂರದಲ್ಲಿರುವ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಇದೀಗ ಜಾತ್ರಾ ಸಂಭ್ರಮ ಮನೆ ಮಾಡಿದೆ. ಒಂಬತ್ತು ದಿನಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ಯಾರೂ ಮದ್ಯಪಾನ ಮಾಡುವಂತಿಲ್ಲ. ಕಾಲಿಗೆ ಚಪ್ಪಲಿಯನ್ನೂ ಹಾಕುವಂತಿಲ್ಲ. ಅದೇನಪ್ಪ ಇಷ್ಟು ಕಟ್ಟುನಿಟ್ಟಿನ ಕ್ರಮ ಅಂತೀರಾ? ಹಾಗಿದ್ರೆ ಇದು ಯಾವ ಜಾತ್ರೆ ಅಂತೀರಾ? ಇಲ್ಲಿದೆ ನೋಡಿ ಕಂಪ್ಲೀಟ್ ಸ್ಟೋರಿ.
ಉಪ್ಪಿನ ಬೆಟಗೇರಿ ಗ್ರಾಮದಲ್ಲಿ 21 ವರ್ಷಗಳ ಹಿಂದೆ ಗ್ರಾಮ ದೇವಿಯರಾದ ದ್ಯಾಮವ್ವ ಹಾಗೂ ದುರ್ಗಾದೇವಿಯರ ಜಾತ್ರೆ ನಡೆದಿತ್ತು. ಅದಾದ ಬಳಿಕ ಪ್ರಸಕ್ತ ವರ್ಷ ಅದ್ಧೂರಿಯಿಂದ ಜಾತ್ರೆಯನ್ನು ಆಚರಿಸಲಾಗುತ್ತಿದೆ. ಈಗಾಗಾಲೇ ಜಾತ್ರೆ ಆರಂಭಗೊಂಡಿದ್ದು, ಒಂಬತ್ತು ದಿನಗಳ ಕಾಲ ಈ ಜಾತ್ರೆ ನಡೆಯಲಿದೆ. ದೇವಿಯರಿಗೆ ಬಣ್ಣ ಮಾಡಿಸಿ, ಸದ್ಯ ಮೂರ್ತಿಗಳನ್ನು ದೇವಸ್ಥಾನದಲ್ಲಿಡಲಾಗಿದೆ. ನಾಳೆಯಿಂದ ಹೊನ್ನಾಟಕ್ಕೆ ವಿವಿಧ ಓಣಿಗಳಿಗೆ ಮೂರ್ತಿಗಳು ತೆರಳಲಿವೆ.
ಒಂಬತ್ತು ದಿನಗಳ ಕಾಲ ನಡೆಯುವ ಈ ಜಾತ್ರೆ ಸಂದರ್ಭದಲ್ಲಿ ಗ್ರಾಮಸ್ಥರು ಯಾರೂ ಚಪ್ಪಲಿ ಹಾಕಬಾರದು ಹಾಗೂ ಮದ್ಯಪಾನ ಮಾಡಬಾರದು ಎಂದು ಡಂಗುರ ಸಾರಲಾಗಿದೆ. ಅಲ್ಲದೇ ಜಾತ್ರಾ ಮಹೋತ್ಸವದ ಅಂಗವಾಗಿ ಪುರಾಣ ಹಾಗೂ ಪ್ರತಿದಿನ ಅನ್ನ ಸಂತರ್ಪಣೆಯನ್ನೂ ಮಾಡಲಾಗುತ್ತಿದೆ. ಗ್ರಾಮದೇವಿಯರ ಶಕ್ತಿ ದೊಡ್ಡದಾಗಿರುವುದರಿಂದ ಇಲ್ಲಿ ಸಂಪ್ರದಾಯ ಪಾಲನೆ ಅಷ್ಟೇ ಮಹತ್ವದ್ದಾಗಿದೆ.
ಒಟ್ಟಾರೆಯಾಗಿ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಗ್ರಾಮದೇವಿಯರ ಜಾತ್ರಾ ಮಹೋತ್ಸವ ಕಳೆಗಟ್ಟಿದ್ದು, ದೇವಸ್ಥಾನದಲ್ಲಿ ಪ್ರತಿನಿತ್ಯ ಹೋಮ, ಹವನಗಳು ನಡೆಯುತ್ತಿವೆ. ನಾಳೆಯಿಂದ ಗ್ರಾಮದಲ್ಲಿ ಹೊನ್ನಾಟ ನಡೆಯಲಿದ್ದು, ಜಾತ್ರಾ ಮಹೋತ್ಸವ ಮತ್ತಷ್ಟು ರಂಗೇರಲಿದೆ.
-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.
Kshetra Samachara
06/05/2022 02:15 pm