ಪಬ್ಲಿಕ್ ನೆಕ್ಸ್ಟ್ ವರದಿ- ಈರಣ್ಣ ವಾಲಿಕಾರ
ಹುಬ್ಬಳ್ಳಿ: ನಿನ್ನೆ ಧಾರವಾಡದಲ್ಲಿ ವೀರ ಸಾವರ್ಕರ್ ಭಾವಚಿತ್ರಕ್ಕೆ ಬೆಂಕಿ ಹಚ್ಚಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇವತ್ತು ವಾಣಿಜ್ಯ ನಗರಿ ಹುಬ್ಬಳ್ಳಿ ಹೊತ್ತಿ ಊರಿಯೋ ಹಂತಕ್ಕೆ ಹೋಗಿತ್ತು. ಆದ್ರೆ, ಪೊಲೀಸರ ಸಮಯ ಪ್ರಜ್ಞೆಯಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಬೂದಿ ಮುಚ್ಚಿದ ಕೆಂಡದಂತಿದೆ..
ಮೊನ್ನೆ ಮಾಜಿ ಸಿಎಂ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರ ಭದ್ರತಾ ವೈಫಲ್ಯದ ಹಿನ್ನೆಲೆ ನಿನ್ನೆ ಕೈ ಪಾಳಯ ಧಾರವಾಡದಲ್ಲಿ ಪ್ರತಿಭಟನೆಗೆ ಇಳಿದಿತ್ತು. ಇದೇ ಹೊತ್ತಿನಲ್ಲಿ ಗೃಹ ಖಾತೆ ಸಚಿವ ಆರಗ ಜ್ಞಾನೇಂದ್ರ ಭಾವಚಿತ್ರ ದಹಿಸಲು ಮುಂದಾದಾಗ, ಏಕಾ ಏಕಿ ಸಾವರ್ಕರ್ ಭಾವಚಿತ್ರ ತಂದ ಕೈ ಕಾರ್ಯಕರ್ತರು ಅದನ್ನೂ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ರು. ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕೋಕೆ ಅಂತ ಪ್ಲಾನ್ ಮಾಡಿಕೊಂಡು ಬಂದಿದ್ದ ಬಿಜೆಪಿ ಕಾರ್ಯಕರ್ತರು, ಕಾಂಗ್ರೆಸ್ ವಿರುದ್ಧ ಘೋಷಣೆ ಹಾಕೋಕೆ ಮುಂದಾಗಿ, ಪೊಲೀಸರನ್ನ ದಾಟಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ಅವರ ಕಾರಿಗೆ ಮುತ್ತಿಗೆ ಹಾಕೋಕೆ ಯತ್ನಿಸಿದ್ರು. ಅಷ್ಟರಲ್ಲೇ ಅಲರ್ಟ್ ಆದ ಪೊಲೀಸರು ನೂರಾರು ಬಿಜೆಪಿ ಕಾರ್ಯಕರ್ತರನ್ನ ಬಂಧಿಸಿದ್ದಾರೆ.
ಇನ್ನೂ ಇತ್ತ ಬಿಜೆಪಿ ಕಾರ್ಯಕರ್ತರು ವೀರ ಸಾವರ್ಕರ್ ಅವರ ಭಾವಚಿತ್ರ ಹಿಡಿದುಕೊಂಡು ಕಾಂಗ್ರೆಸ್ ಕಚೇರಿಯತ್ತ ಓಡೋಡಿ ಹೊರಟಿದ್ರು. ಎಂ.ಬಿ ಪಾಟೀಲ್ ಆಗಮನದ ಹಿನ್ನೆಲೆಯಲ್ಲಿ ರಸ್ತೆ ಬದಿಗೆ ಹಾಕಿದ್ದ ಫ್ಲೆಕ್ಸ್, ಕಾಂಗ್ರೆಸ್ ಧ್ವಜಗಳನ್ನ ಹರಿಯುತ್ತ ಪೊಲೀಸರ ನಿಯಂತ್ರಣಕ್ಕೆ ಸಿಗದಂತೆ ಮುನ್ನುಗ್ತಿದ್ರು. ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದ ಪೊಲೀಸ್ ಆಯುಕ್ತ ಲಾಭೂರಾಮ್ ಹೆಚ್ಚಿನ ಸಿಬ್ಬಂದಿ ಕರೆಯಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತರೋಕೆ ಪ್ರಯತ್ನಿಸಿದ್ರು. ಆದ್ರೆ, ಕೈ ಕಚೇರಿ ಎದುರು ಜಮಾಯಿಸಿದ್ದ ಬಿಜೆಪಿ ಕಾರ್ಯಕರ್ತರು ಏಕಾ ಏಕಿ ಮೋದಿ...ಮೋದಿ...ಎಂದು ಘೋಷಣೆ ಹಾಕತೊಡಗಿದ್ರು. ಇದರಿಂದ ಆಕ್ರೋಶಗೊಂಡ ಕೈ ಕಾರ್ಯಕರ್ತರು ಮೋದಿ ವಿರುದ್ಧ ಘೋಷಣೆ ಕೂಗಲು ಆರಂಭಿಸಿದರು. ಈ ಮೂಲಕ ಸಿನಿಮೀಯ ರೀತಿಯ ಘಟನೆಗೆ ಹುಬ್ಬಳ್ಳಿ ಸಾಕ್ಷಿಯಾಯ್ತು. ಅಲ್ದೆ, ಈ ಘಟನೆಯ ಬಗ್ಗೆ ಮಾತನಾಡಿದ ಎಂ.ಬಿ ಪಾಟೀಲ್ ಅಸಮಾಧಾನ ಹೊರ ಹಾಕಿದ್ರು.
ಹೀಗೆ ಎದುರಾ ಬದುರಾ ಕೈ, ಕಮಲ ಕಾರ್ಯಕರ್ತರ ಪ್ರತಿಭಟನೆ ವಿಕೋಪಕ್ಕೆ ತಿರುಗುವ ಹಂತದಲ್ಲಿದ್ದಾಗ ಅಲರ್ಟ್ ಆದ ಖಾಕಿ ಪಡೆ, ಉಭಯ ಪಕ್ಷದ ಕಾರ್ಯಕರ್ತರನ್ನ ಚದುರಿಸುವಲ್ಲಿ ಯಶಸ್ವಿಯಾದ್ರು. ಬಿಜೆಪಿ ಕಾರ್ಯಕರ್ತರನ್ನ ನಿಯಂತ್ರಿಸುವ ಭರಾಟೆಯಲ್ಲಿ ಡಿಸಿಪಿ ಸಾಹಿಲ್ ಬಾಗ್ಲಾ ತೋಳಿಗೆ ಪೆಟ್ಟಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಇದು ಎಲ್ಲಿಗೆ ಹೋಗಿ ತಲುಪುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
Kshetra Samachara
20/08/2022 07:05 pm