ಧಾರವಾಡ: ಪ್ರಗತಿಪರರ ವಿರುದ್ಧ ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ವಾಗ್ದಾಳಿ ನಡೆಸಿದ್ದಾರೆ.
ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು RSS ವ್ಯಕ್ತಿಯನ್ನು ಗೌರವಿಸುತ್ತೇನೆ. ಆದರೆ, ಮಹಾ ಬುದ್ಧಿಜೀವಿಯಾಗಿ ಮಹಾ ಕಳ್ಳನಾದವರಿಗೆ ಗೌರವ ಕೊಡಬೇಕಾ? RSS ವ್ಯಕ್ತಿ ದೇಶಕ್ಕಾಗಿ ಚಿಂತನೆ ಮಾಡುತ್ತಾನೆ. ಮದುವೆಯಾಗದೆ, ಚಾಪೆಯಲ್ಲಿ ಮಲಗುತ್ತಾನೆ. ಪ್ರತಿದಿನ ದೇಶಕ್ಕಾಗಿ ಚಿಂತನೆ ಮಾಡುತ್ತಾನೆ. ಅವನನ್ನು ನಾನು ಪ್ರೀತಿಸುತ್ತೇನೆ, ಗೌರವಿಸುತ್ತೇನೆ ಎಂದರು.
ಆದರೆ, ನಾನು ಮಹಾ ಪ್ರಗತಿಪರ ಎಂದು ಹೇಳಿಕೊಂಡು ಸರ್ಕಾರದ ಹಣ ಕೊಳ್ಳೆ ಹೊಡೆದು, ಮಹಾಮೋಸಗಾರನಾಗಿ ಲೋಕಕ್ಕೆಲ್ಲ ಮಹಾ ಬುದ್ಧಿ ಜೀವಿಯಾಗಿ, ಮಹಾಕಳ್ಳನಾಗಿದ್ದರೆ ನಾವು ಅವರಿಗೆ ಗೌರವ ಕೊಡಬೇಕಾ? ಎಂದು ಪ್ರಶ್ನಿಸಿದರು.
ರಂಗಭೂಮಿಯಲ್ಲಿ ರಾಜಕಾರಣ ವಿಚಾರಕ್ಕೆ ಮಾತನಾಡಿದ ಅವರು, ಗಿರೀಶ್ ಕಾರ್ನಾಡ್ ಸಹ ರಾಜಕಾರಣ ಮಾಡಿದವರೇ. ಸಾಹಿತಿಗಳು ಸಿದ್ದರಾಮಯ್ಯ ಮನೆ ಬಾಗಿಲಿನಲ್ಲಿ ನಿಲ್ಲುತ್ತಿದ್ದರು ಎಂದು ಅಡ್ಡಂಡ ಕಾರ್ಯಪ್ಪ ಆರೋಪಿಸಿದರು.
ರಂಗಭೂಮಿಯಲ್ಲಿ ರಾಜಕಾರಣ ಮೊದಲಿನಿಂದ ಇದೆ. ಈಗ ಬಂದಿದೆ ಎನ್ನುವುದು ಸುಳ್ಳೇ?. ಈಗ ಸರ್ಕಾರದ ಭಾಗ ಅಲ್ಲದವರಿಗೆ ಆಗಿನದು ಅಲ್ಲ ಅನಿಸುತ್ತಿದೆ. ಸರ್ಕಾರದ ಭಾಗ ಆಗಿದ್ದಾಗ ರಾಜಕೀಯವಾಗಿಯೇ ಇದ್ದರು. ಹಿರಿಯ ಸಾಹಿತಿ ಮರುಳಸಿದ್ದಪ್ಪ ಸೇರಿ ಅನೇಕರು ಕಾಂಗ್ರೆಸ್ ಕರಪತ್ರ ಹಂಚಿದ್ದಾರೆ. ಎಲ್ಲರೂ ರಾಜಕೀಯ ಮಾಡಿದ್ದಾರೆ ಎಂದು ದೂರಿದರು.
ಗಿರೀಶ್ ಕಾರ್ನಾಡ್ ಸಹ ರಾಜಕೀಯ ಮಾಡಿದ್ದಾರೆ. ಅರ್ಬನ್ ನಕ್ಸಲ್ ಅಂತಾ ಬೋರ್ಡ್ ಹಾಕಿಕೊಂಡು ಕುಳಿತ್ತಿದ್ದರು. ಸಿದ್ದರಾಮಯ್ಯ ಸರ್ಕಾರವಿದ್ದಾಗ ಸಾಹಿತಿಗಳು ಅವರ ಮನೆ ಬಾಗಿಲಿನಲ್ಲೇ ಇದ್ದರು. ರಾಜಕೀಯ ಅಂದರೆ ಹೊಲಸು ಅಲ್ಲ. ರಾಜಕೀಯವೂ ಬೇಕು. ಸಂವಿಧಾನದ ಅಡಿಯಲ್ಲಿಯೇ ರಾಜಕೀಯ ನಡೆಯುತ್ತಿದೆ. ರಾಜಕಾರಣ, ಧರ್ಮ, ರಂಗಭೂಮಿ ಬಿಟ್ಟು ಇರುವುದಿಲ್ಲ. ಪರ್ವ ಓದಿದವರೂ ರಂಗ ಪ್ರಯೋಗಕ್ಕೆ ವಿರೋಧ ಮಾಡಿದ್ದರು. ಭೈರಪ್ಪನವರ ವಿರೋಧದ ಕಾರಣಕ್ಕೆ ಇದಕ್ಕೂ ವಿರೋಧ ಮಾಡಿದ್ದರು. ಭೈರಪ್ಪ ಬಲಪಂಥಕ್ಕೆ ವಾಲಿದವರು ಅಂತಾ ತಿಳಿದಿದ್ದಾರೆ. ಪ್ರಗತಿಪರ ಚಿಂತಕರಲ್ಲಿ ಭೈರಪ್ಪ ನಮ್ಮ ಕಡೆಯವರಲ್ಲ ಅಂತಿದೆ. ಅನೇಕ ಸಾಹಿತಿಗಳ ವರ್ಗ ಇಂದಿಗೂ ಭೈರಪ್ಪನವರನ್ನು ವಿರೋಧಿಸುತ್ತಿದೆ. ಮೈಸೂರು ದಸರಾಗೂ ಕರೆದಿರಲಿಲ್ಲ. ರಂಗಾಯಣಕ್ಕೂ ಅವರನ್ನು ಇಲ್ಲಿಯವರೆಗೆ ಕರೆದಿರಲಿಲ್ಲ. ನಾನು ಬಂದ ಬಳಿಕವೇ ಕರೆಯಲಾಗಿದೆ. ಕೂಗಳತೆ ದೂರದಲ್ಲಿದ್ದರೂ ಕರೆದಿರಲಿಲ್ಲ. ಭೈರಪ್ಪನವರ ಧೋರಣೆಯಿಂದಾಗಿ ವಿರೋಧ ಮಾಡಿದ್ದಾರೆ ಎಂದು ಹರಿಹಾಯ್ದರು.
ನಾಟಕ ನೋಡಿದ ಬಳಿಕವೇ ಪರ್ವದ ಬಗ್ಗೆ ವಿರೋಧಿಸುವವರಿಗೆ ಗೊತ್ತಾಗಿದೆ. ನೋಡುವ ಮೊದಲೇ ವಿರೋಧ ಮಾಡಿದರೇ ಹೇಗೆ? ಸರ್ಕಾರ ತನಗೆ ಬೇಕಾದವರನ್ನು ಬೇಕಾದಲ್ಲಿ ನೇಮಕ ಮಾಡುತ್ತದೆ. ಎಲ್ಲ ಸರ್ಕಾರ ಇದನ್ನೇ ಮಾಡಿದೆ. ಯಾವುದೇ ನಿಗಮ, ಅಕಾಡೆಮಿ, ರಂಗಾಯಣಕ್ಕೆ ಹಾಗೆಯೇ ನೇಮಕ ಆಗಿದೆ. ಹಾಗೆಯೇ ನಾವೂ ಬಂದಿದ್ದೇವೆ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
30/03/2022 06:05 pm