ಹುಬ್ಬಳ್ಳಿ: ಮೇಕೆದಾಟು ಪಾದಯಾತ್ರೆಯನ್ನು ಹತ್ತಿಕ್ಕಲು ವೀಕೆಂಡ್ ಕರ್ಪ್ಯೂ ಜಾರಿಗೆ ತರಲಾಯಿತು. ಕಾಂಗ್ರೆಸ್ ಪಾದಯಾತ್ರೆಯಿಂದ ಕೋವಿಡ್ ಹರಡಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ, ಆರ್.ಅಶೋಕ, ಸೋಮಶೇಖರ್ಗೆ ಕೋವಿಡ್ ದೃಢಪಟ್ಟಿದ್ದು ನಮ್ಮ ಪಾದಯಾತ್ರೆಯಿಂದನಾ..? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಮಹದಾಯಿ, ಕೃಷ್ಣ, ಕಲ್ಯಾಣ ಕರ್ನಾಟಕದ 371 ಜೆ ಪರವಾಗಿ ಹೋರಾಟ ನಡೆಸುತ್ತೆವೆ. ಮಹದಾಯಿ ಪಾದಯಾತ್ರೆ ಬಗ್ಗೆ ಈಗಾಗಲೇ ಪಕ್ಷದಲ್ಲಿ ಚರ್ಚೆ ನಡೆದಿದೆ. ನಮ್ಮ ಅಧಿಕಾರದ ಸಂದರ್ಭದಲ್ಲಿ ಹುಬ್ಬಳ್ಳಿಯಲ್ಲಿ ಯಡಿಯೂರಪ್ಪ ಹೋರಾಟ ಮಾಡಿದ್ದರು. ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಮಹದಾಯಿ ಕಾಮಗಾರಿ ಜಾರಿಗೆ ತರುತ್ತೆವೆ, ರಕ್ತದಲ್ಲಿ ಬರೆದು ಕೊಡುತ್ತೆನೆಂದು ಯಡಿಯೂರಪ್ಪ ಅವರು ಮಾತು ಕೊಟ್ಟಿದ್ದರು. ಈಗ ಉತ್ತರ ಕರ್ನಾಟಕ ಭಾಗದ ಜನರಿಗೆ ನೀರು ಬಂತಾ...? ಎಂದು ಬಿ.ಎಸ್.ವೈಗೆ ಸಿದ್ದರಾಮಯ್ಯ ಪ್ರಶ್ನಿಸಿದರು.
ಮುಂದಿನ ದಿನಗಳಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೆವೆ. ಜನರು ಈಗಾಗಲೇ ತತ್ತರಿಸಿದ್ದಾರೆ, ಇವರಿಗೆ ವೀಕೆಂಡ್ ಕರ್ಪ್ಯೂ ಅವಶ್ಯಕತೆ ಇರಲಿಲ್ಲ. ಸರ್ಕಾರದ ದಿನಕ್ಕೊಂದು ಬೇಜವಾಬ್ದಾರಿ ತನದ ನಿರ್ಧಾರದಿಂದ ಜನರು ಬಿಜೆಪಿಯನ್ನು ಕೈ ಬಿಡಲು ನಿರ್ಧಾರ ಮಾಡಿದ್ದಾರೆ ಎಂದು ಅವರು ಹೇಳಿದರು.
Kshetra Samachara
24/01/2022 10:38 am