ಧಾರವಾಡ: ಧಾರವಾಡ ಹೊಯ್ಸಳನಗರದ ಹತ್ತಿರ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸೇರಿದ ಜಾಗೆಯಲ್ಲಿ ಉನ್ನತ ಶಿಕ್ಷಣ ಅಕಾಡೆಮಿ ಕಟ್ಟಡ ನಿರ್ಮಾಣವಾಗುತ್ತಿದ್ದು, ಕಾಮಗಾರಿ ಭರದಿಂದ ಸಾಗಿದೆ.
ಸೋಮವಾರ ಉನ್ನತ ಶಿಕ್ಷಣ ಅಕಾಡೆಮಿ ನಿರ್ಮಾಣವಾಗುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಅರವಿಂದ ಬೆಲ್ಲದ ಅವರು, ಕಾಮಗಾರಿಯನ್ನು ವೀಕ್ಷಿಸಿದರು.
ನಂತರ ಮಾಹಿತಿ ನೀಡಿದ ಶಾಸಕ ಬೆಲ್ಲದ, ಧಾರವಾಡದಲ್ಲಿ ಎರಡು ವಿಶ್ವವಿದ್ಯಾಲಯಗಳು, ಐಐಟಿ ಹಾಗೂ ಐಐಐಟಿ ಸಂಸ್ಥೆಗಳಿವೆ. ಇದರ ಜೊತೆಗೆ ಉನ್ನತ ಶಿಕ್ಷಣ ಅಕಾಡೆಮಿ ಕೂಡ ನಿರ್ಮಾಣವಾಗುತ್ತಿದೆ.
ಕಳೆದ 2 ವರ್ಷದಿಂದ ಅಕಾಡೆಮಿ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ವಸತಿ ನಿಲಯ, ಸಿಬ್ಬಂದಿ ಕ್ವಾರ್ಟರ್ಸ್ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಮುಖ್ಯ ಕಟ್ಟಡ, ಗೆಸ್ಟ್ ಹೌಸ್ ಹಾಗೂ ಕ್ಯಾಂಟೀನ್ ಕಟ್ಟಡ ಕಾಮಗಾರಿ ನಡೆಯುತ್ತಿದೆ ಎಂದರು.
ಧಾರವಾಡಕ್ಕೆ ಇಂತದೊಂದು ಸಂಸ್ಥೆ ಬೇಕು ಎಂದು 2014ರಲ್ಲಿ ನಾನು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೆ. ಸುಮಾರು 90 ಕೋಟಿ ವೆಚ್ಚದಲ್ಲಿ ಈ ಕಾಮಗಾರಿ ನಡೆಯುತ್ತಿದೆ.
ಈಗಾಗಲೇ 70 ಕೋಟಿ ಬಿಡುಗಡೆಯಾಗಿದೆ. ದೇಶದಲ್ಲಿ ಇದೊಂದು ಯುನಿಕ್ ಅಕಾಡೆಮಿಯಾಗಲಿದೆ. ಕಾಲೇಜು ಪ್ರಾಧ್ಯಾಪಕರು ತಮ್ಮ ವಿಷಯ ಅಷ್ಟೇ ಅಲ್ಲದೇ ಬೇರೆ ವಿಷಯದ ಬಗ್ಗೆಯೂ ಅಧ್ಯಯನ ಮಾಡಲು ಈ ಅಕಾಡೆಮಿ ಉಪಯುಕ್ತವಾಗಲಿದೆ. ಒಟ್ಟಿನಲ್ಲಿ ಈ ಅಕಾಡೆಮಿ ಇಡೀ ಶಿಕ್ಷಣ ವ್ಯವಸ್ಥೆಗೆ ಹೊಸ ದಿಕ್ಸೂಚಿಯಾಗಲಿದೆ ಎಂದರು.
Kshetra Samachara
28/12/2020 08:03 pm