ಅಳ್ನಾವರ: ತಾಲೂಕಿನ ಜನರನ್ನು ಮಾತ್ರವಲ್ಲ ಜಿಲ್ಲೆಯ ಜನರನ್ನು ಸಹ ತನ್ನತ್ತ ಸೆಳೆಯುವಂತೆ ಸಿದ್ಧವಾಗಿದೆ ಸಾಲು ಮರದ ತಿಮ್ಮಕ್ಕ ವೃಕ್ಷ ಉದ್ಯಾನವನ. ಇಲ್ಲಿನ ಚೆಲುವು ನೋಡುಗರ ಹೃನ್ಮನ ತಣಿಸುತ್ತದೆ. ಪುಟಾಣಿಗಳಿಂದ ಹಿಡಿದು ಹಿರಿಯ ಜೀವದವರೆಗೂ ಖುಷಿಯಿಂದ ಕಾಲ ಕಳೆಯಬಹುದು.
ಅಂದ ಹಾಗೇ ಇದು ಇರುವುದು ಧಾರವಾಡ ಜಿಲ್ಲೆ ಅಳ್ನಾವರ ತಾಲೂಕಿನಲ್ಲಿ. ಅಳ್ನಾವರ ಪಟ್ಟಣದಲ್ಲಿರುವ ಈ ಪಾರ್ಕ್ ಬರೋಬ್ಬರಿ 19 ಎಕರೆ ವಿಸ್ತೀರ್ಣದಲ್ಲಿದೆ. 2019-20ರಲ್ಲಿ ಇದರ ಕಾರ್ಯ ಶುರುವಾಗಿ ಇದೀಗ ಉದ್ಘಾಟನೆ ಹಂತಕ್ಕೆ ಬಂದಿದೆ. ಉದ್ಯಾನವನದಲ್ಲಿನ ಅಂದದಿಂದಲೇ ಪರಿಸರ ಪ್ರೇಮಿಗಳನ್ನು ಸೇರಿದಂತೆ ಎಲ್ಲರನ್ನು ತನ್ನತ್ತ ಸೆಳೆಯುತ್ತಿದೆ. ಏಪ್ರಿಲ್ 11ರಿಂದ ನೀವು ಎಲ್ಲಿಗೆ ಎಂಟ್ರಿ ಕೊಡಬಹುದು.
19 ಎಕರೆ ವಿಸ್ತೀರ್ಣದ ಪಾರ್ಕ್ ನಲ್ಲಿ ಹಲವಾರು ಬಗೆಯ ಮರಗಳು,ಹೂವಿನ ಗಿಡಗಳು, ಅಲಂಕಾರಿಕ ಗಿಡಗಳಿವೆ.ಪಾರ್ಕ ನಡುವೆ ಸಾಲು ಮರದ ತಿಮ್ಮಕ್ಕನವರ ಪ್ರತಿಮೆ ವಿಶೇಷವಾಗಿದ್ದು. ಮಕ್ಕಳಿಗಾಗಿ 12 ವಿವಿಧ ಬಗೆಯ ಆಟಿಕೆ ಸಲಕರಣೆಗಳಿವೆ. ಹಾರ್ನ್ ಬಿಲ್ ಪ್ರಭೇದದ ಪಕ್ಷಿಯ ನಾಲ್ಕು ಮೂರ್ತಿಗಳಿವೆ. ದೇಹವನ್ನು ಹುರಿಗೊಳಿಸುವವರಿಗೆ ಜಿಮ್ ಉಪಕರಣಗಳಿವೆ. ಯೋಗ ಮಾಡಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ ಪಕ್ಕದಲ್ಲಿಯೇ ಡೌಗಿನಾಲಾ ಹಳ್ಳ ಹರಿಯುವುದರಿಂದ ಅಂಬಿಕಾನಗರದ ಸೈಕ್ಸ್ ವೀವ್ ಪಾಯಿಂಟ್ ನಂತೆ ಗೋಚರಿಸುತ್ತೆ.
ಇನ್ನು ಆಯುಷ್ ಇಲಾಖೆಯ ಸಹಕಾರದಲ್ಲಿ ಔಷಧಿಯ ಸಸ್ಯಗಳನ್ನು ನೆಡಲಾಗಿದೆ. ಉದ್ಯಾನದಲ್ಲಿ ಸ್ವಚ್ಛತೆ ಕಾಪಾಡಲು ಕಸದ ತೊಟ್ಟಿಗಳನ್ನ ನಿರ್ಮಿಸಲಾಗಿದೆ. ಸ್ಥಳೀಯರ ಸಹಕಾರದಿಂದ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಇಷ್ಟೆಲ್ಲದ ಹಿಂದೆ ಇರುವುದು ಅರಣ್ಯ ಇಲಾಖೆ.ಇಲ್ಲಿನ ಅಧಿಕಾರಿಗಳು, ಸಿಬ್ಬಂದಿಯ ಮುತವರ್ಜಿಯಿಂದ ಸುಂದರ ಪಾರ್ಕ್ ತೆಲೆ ಎತ್ತಿದೆ. ಏಪ್ರಿಲ್ 11ರಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಅವರು ಈ ಉದ್ಯಾನವನ್ನು ಉದ್ಘಾಟಿಸಲಿದ್ದಾರೆ. ಕಲಘಟಗಿ ಶಾಸಕ ಸಿ.ಎಂ ನಿಂಬಣ್ಣವರ ಅಧ್ಯಕ್ಷತೆ, ಅರಣ್ಯ ಹಾಗೂ ಆಹಾರ ಖಾತೆ ಸಚಿವ ಉಮೇಶ್ ಕತ್ತಿ ಗೌರವ ಉಪಸ್ಥಿತಿ ಇರಲಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಮಾಜಿ ಸಚಿವ ಜಗದೀಶ್ ಶೆಟ್ಟರ್ ಸೇರಿದಂತೆ ಗಣ್ಯರು, ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಮಹಾಂತೇಶ ಪಠಾಣಿ
ಪಬ್ಲಿಕ್ ನೆಕ್ಸ್ಟ್, ಅಳ್ನಾವರ
Kshetra Samachara
10/04/2022 05:28 pm