ಧಾರವಾಡ: ನಾಡಿನ ಜನತೆ, ಮಕ್ಕಳು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆಂದರೆ ಅದಕ್ಕೆ ಪೊಲೀಸ್ ಮತ್ತು ಎಲ್ಲಾ ರಕ್ಷಣಾ ತುಕಡಿಗಳ ನಿರಂತರ ಕರ್ತವ್ಯಪರತೆಯೇ ಕಾರಣವಾಗಿದೆ. ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ವೃತ್ತಿಪರತೆಗೆ ನಾಡಿನ ನಾಗರಿಕರು ಕೃತಜ್ಞರಾಗಿರಬೇಕು ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಬಿ.ಗುಡಸಿ ಹೇಳಿದರು.
ಧಾರವಾಡದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಆವರಣದಲ್ಲಿ ಇಂದು ಜಿಲ್ಲಾ ಪೊಲೀಸ್ ಏರ್ಪಡಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಮಾಜದ ಒಳಿತು ಮತ್ತು ರಕ್ಷಣೆಗಾಗಿ ಹಗಲಿರುಳು ದುಡಿಯುತ್ತಿರುವ ಪೊಲೀಸರನ್ನು ಕೆಲವು ಮಾಧ್ಯಮಗಳು ಮತ್ತು ಸಿನಿಮಾಗಳಲ್ಲಿ ಅಪಹಾಸ್ಯದ ರೀತಿಯಲ್ಲಿ ಬಿಂಬಿಸುತ್ತಿರುವುದು ಅಕ್ಷಮ್ಯ ಮತ್ತು ಅನ್ಯಾಯವಾಗಿದೆ. ಇದನ್ನು ತಡೆಯಲು ಒತ್ತಾಯಿಸಿ ಸಂಬಂಧಿಸಿದ ಇಲಾಖೆಗೆ ಪತ್ರ ಬರೆಯುವುದಾಗಿ ತಿಳಿಸಿದರು. ಪೊಲೀಸ್ ಹುತಾತ್ಮರ ಸೇವೆಯನ್ನು ಪ್ರತಿಯೊಬ್ಬರು ಸ್ಮರಿಸಿ, ಗೌರವಿಸಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ್ ಮಾತನಾಡಿ,1959 ರ ಅಕ್ಟೋಬರ್ 10 ರಂದು ಲಡಾಕ್‌ನ ಹಾಟ್‌ಸ್ಪ್ರಿಂಗ್ ಪೋಸ್ಟ್ ಹತ್ತಿರ ಸಿಆರ್‌ಪಿಎಫ್ ಡಿಎಸ್‌ಪಿ ಕರಣಸಿಂಗ್ ನೇತೃತ್ವದಲ್ಲಿ ಪಹರೆ ಮಾಡುತ್ತಿದ್ದ ಸಂದರ್ಭದಲ್ಲಿ ಹಲವು ಚೀನಾ ಸೈನಿಕರು ಹಠಾತ್ ದಾಳಿ ಮಾಡಿದ ಪರಿಣಾಮ ಹೋರಾಟದಲ್ಲಿದ್ದ 10 ಜನ ಪೊಲೀಸರು ವೀರ ಮರಣವನ್ನಪ್ಪಿದರು. 9 ಜನ ಪೊಲೀಸರು ಚೀನಾ ಸೈನಿಕರ ವಶವಾದರು. ಈ ಶೂರರ ಸ್ಮರಣೆಗಾಗಿ ಲಡಾಕ್‌ನ ಅಕ್ಸಾಯ್‌ಚಿನ್ ಪ್ರಾಂತ್ಯದಲ್ಲಿ 16 ಸಾವಿರ ಅಡಿ ಎತ್ತರದಲ್ಲಿ ಸ್ಮಾರಕ ನಿರ್ಮಿಸಲಾಗಿದೆ. ದೇಶದಾದ್ಯಂತ ಪ್ರತಿವರ್ಷ ಅಕ್ಟೋಬರ್ 21 ರಂದು ಪೊಲೀಸ್ ಹುತಾತ್ಮ ದಿನ ಆಚರಿಸಲಾಗುತ್ತಿದೆ ಎಂದರು. ಕಳೆದ ಒಂದು ವರ್ಷದ ಅವಧಿಯಲ್ಲಿ ಕರ್ತವ್ಯದ ವೇಳೆ ಪ್ರಾಣತ್ಯಾಗ ಮಾಡಿದ ದೇಶದ 377 ಪೊಲೀಸರ ಹೆಸರುಗಳನ್ನು ವಾಚಿಸಿ, ಗೌರವ ಸಲ್ಲಿಸಿದರು.
ಗಾಳಿಯಲ್ಲಿ ಮೂರುಸುತ್ತು ಕುಶಾಲ ತೋಪು ಹಾರಿಸಿ, ಪೊಲೀಸ್ ವಾದ್ಯಮೇಳದಲ್ಲಿ ಸುಶ್ರಾವ್ಯವಾಗಿ ರಾಷ್ಟ್ರಗೀತೆ ನುಡಿಸಿ, ಸ್ಮಾರಕಕ್ಕೆ ಪೊಲೀಸ್ ಅಧಿಕಾರಿಗಳು ಹಾಗೂ ಗಣ್ಯರು ರೀತ್ ಅರ್ಪಿಸಿ ಹುತಾತ್ಮರಿಗೆ ಗೌರವ ಸಲ್ಲಿಸಿದರು. ಕೋವಿಡ್‌ನಿಂದ ನಿಧನರಾದ ಧಾರವಾಡದ ಆರ್‌ಎಸ್ಐ ಜಿ.ಎಂ.ಹೆಗಡೆ ಅವರ ಧರ್ಮಪತ್ನಿಗೆ ಪುಸ್ತಕ ನೀಡಿ ಗೌರವಿಸಲಾಯಿತು. ಪರೇಡ್ ಕಮಾಂಡರ್ ಆರ್‌ಪಿಐ ಬಸವರಾಜ ಚನ್ನಮ್ಮವರ ನೇತೃತ್ವದಲ್ಲಿ ಆಕರ್ಷಕ ಮತ್ತು ಶಿಸ್ತಿನ ಪಥ ಸಂಚಲನ, ಹುತಾತ್ಮರಿಗೆ ಗೌರವ, ಪೊಲೀಸ್ ವಾದ್ಯಮೇಳ ಜರುಗಿತು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ, ಗುಂಗರಗಟ್ಟಿ ಅರಣ್ಯ ಅಕಾಡೆಮಿ ಜಂಟಿ ನಿರ್ದೇಶಕಿ ಸೋನಾಲ್ ವೃಷ್ಣಿ, ಪ್ರೊಬೆಷನರಿ ಐಎಎಸ್ ಅಧಿಕಾರಿ ಮಾಧವ ಗಿತ್ತೆ, ಎಸಿಎಫ್ ಸೌರಭ್‌ಕುಮಾರ ಮತ್ತಿತರರು ವೇದಿಕೆಯಲ್ಲಿದ್ದರು.
Kshetra Samachara
21/10/2021 11:30 am