ಲಕ್ಷ್ಮೇಶ್ವರ: ದೇಶದ ಪ್ರತಿಯೊಬ್ಬ ನಾಗರಿಕನಿಗೆ ಆಧಾರ ಪಡೆದುಕೊಳ್ಳುವದು ಅನಿವಾರ್ಯವಾಗಿದೆ. ಆದರೆ ಲಕ್ಷ್ಮೇಶ್ವರ ತಾಲೂಕಿನಲ್ಲಿ ಆಧಾರ ಕಡ್ಡಾಯಗೊಳಿಸುವ ಸರಕಾರ ಅದನ್ನು ಸುಲಭವಾಗಿ ಪಡೆದುಕೊಳ್ಳಲು ಇನ್ನೂ ಸಹ ಸರಳ ಮಾರ್ಗಗಳನ್ನು ಕಲ್ಪಿಸಿಕೊಂಡಿಲ್ಲ. ಇದರಿಂದ ತಾಲೂಕಿನ ಗ್ರಾಮೀಣ ಭಾಗದ ಜನರು ಆಧಾರ ಕಾರ್ಡ್ ಪಡೆಯಲು ಪಟ್ಟಣದ ಪ್ರಧಾನ ತಹಶಿಲ್ದಾರರ ಕಚೇರಿಯ ಪ್ರವೇಶ ಬಾಗಿಲು ಮೇಲೆ ರಾತ್ರಿ ಇಡೀ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು.. ಸರಕಾರದ ಸೌಲಭ್ಯ ಪಡೆಯಲು ಹಾಗೂ ಶಿಕ್ಷಣ ಮತ್ತು ಇನ್ನಿತರ ಉದ್ದೇಶಗಳಿಗೆ ಆಧಾರಕಾರ್ಡ ಕಡ್ಡಾಯಗೊಳಿಸಲಾಗಿದೆ. ಆದರೆ ಆಧಾರ ಕಾರ್ಡ್ ಪಡೆಯಲು ಜನರು ಪಡದಾಡುವಂತಹ ಪರಿಸ್ಥಿತಿ ನಿರ್ಮಾಣ ಗೊಂಡಿದೆ. ದೂರದ ಹಳ್ಳಿಗಳಿಂದ ಬಂದ ವಿಕಲಚೇತನರು ಹಾಗೂ ಜನರು ಆಧಾರ ಕಾರ್ಡ್ ಗಾಗಿ ಇಲ್ಲಿನ ಪ್ರಧಾನ ಅಂಚೆ ಕಚೇರಿಯ ಮುಂಬಾಗದಲ್ಲಿಯೇ ರಾತ್ರಿ ಕಳೆಯುವ ಪಾಡು ದಯನೀಯವಾಗಿತ್ತು.
ಸಂಜೆ ಟೋಕನ್ ಪಡೆಯಲು ತಾಲೂಕಿನ ದೂರದ ಗ್ರಾಮೀಣ ಭಾಗಗಳ ಜನರು ಪಟ್ಟಣದ ತಹಶಿಲ್ದಾರರ ಕಚೇರಿಗೆ ಆಗಮಿಸಿದ್ದರು. ಅಧಿಕಾರಿಗಳು ಮಧ್ಯಾಹ್ನದ ನಂತರ ಟೋಕನ್ ನೀಡಲು ನಿರಾಕರಿಸಿದರು. ಟೋಕನ್ ಪಡೆಯಲು ಮುಂಜಾನೆ ಮಾತ್ರ ಸಮಯ ನಿಗದಿ ಪಡಿಸಿರುವದು ಹಳ್ಳಿಯ ಜನರಿಗೆ ತಿಳಿಯದು. ಅಲ್ಲದೆ ಸಂಜೆಯಾಗಿದ್ದರಿಂದ ಊರುಗಳಿಗೆ ತೆರಳಿ ಮುಂಜಾನೆ ಬರಲು ಬಸ್ ವ್ಯವಸ್ಥೆ ಇಲ್ಲ. ಹೀಗಾಗಿ ವಿಧಿ ಇಲ್ಲದೆ ಆಧಾರಿಗಾಗಿ ದೂರದ ಹಳ್ಳಿಗಳಿಂದ ಬಂದ ಜನರು ತಹಶಿಲ್ದಾರರ ಕಛೇರಿ ಪ್ರವೇಶ ಬಾಗಿಲಿನಲ್ಲಿ ರಾತ್ರಿ ಇಡೀ ಕುಳಿತು ಜಾಗರಣೆ ಮಾಡಿದರು. ಅಂತೂ ಜನರಿಗೆ ಬೆಳ್ಳಿಗೆ 10 ಗಂಟೆಯ ನಂತರವೇ ಟೋಕನ ಭಾಗ್ಯ ಲಭಿಸಿತು.
ಕಛೇರಿಯಲ್ಲಿ 20 ಜನರಿಗೆ ಮಾತ್ರ ದಿನದ ಆಧಾರ ಟೋಕನ್ ನೀಡಲಾಗುತ್ತದೆ. ಇನ್ನೂ ಬಹಳಷ್ಟು ಆಧಾರ ಮಾಡಿಸುವ ಹಾಗೂ ತಿದ್ದುಪಡಿ ಮಾಡಿಸಿಕೊಳ್ಳುವ ಜನರು ಇರುವುದರಿಂದ ಸಮಸ್ಯೆ ಬಗೆ ಹರಿಯುವ ಲಕ್ಷಣಗಳಿಲ್ಲ. ಹೀಗಾಗಿ ಅಧಿಕಾರಿಗಳು ತುರ್ತು ಪರ್ಯಾಯ ವ್ಯವಸ್ಥೆ ಮಾಡಬೇಕಾಗಿದೆ. ಅಲ್ಲದೆ ಜನರಿಗೆ ನಿರಾಯಾಸವಾಗಿ ಆಧಾರ ಕಾರ್ಡ್ ದೊರೆಯುವಂತೆ ಮಾರ್ಗ ಕಲ್ಪಿಸಿಕೊಡಬೇಕಾಗಿದೆ ಎಂದು ಪ್ರಜ್ಞಾವಂತ ನಾಗರಿಕರ ಮಾತಾಗಿದೆ.
Kshetra Samachara
06/08/2021 10:09 pm