ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ರೊಕ್ಕ ಕೊಟ್ಟು ನೀರು ಕುಡಿಬೇಕು...ಇರೋ ನೀರು ಕುಡದ್ರೇ ದವಾಖಾನೆಗೆ ರೊಕ್ಕ ಹಾಕಬೇಕು...!

ಹುಬ್ಬಳ್ಳಿ: ಕುಡಿಯುವ ನೀರು ಮೂಲಭೂತ ಸೌಕರ್ಯಗಳಲ್ಲೊಂದು. ಅದನ್ನು ಜನರಿಗೆ ಒದಗಿಸುವ ಎಲ್ಲ ವ್ಯವಸ್ಥೆಯನ್ನು ಆ ಗ್ರಾಮದಲ್ಲಿ ಮಾಡಲಾಗಿದೆ. ಆದರೆ, ಅದೇ ವ್ಯವಸ್ಥೆಯಿಂದ ಜನರಿಗೆ ಕುಡಿಯಲು ಶುದ್ಧ ನೀರು ಮಾತ್ರ ಜನರಿಗೆ ಸಿಗುತ್ತಿಲ್ಲ‌.ಶುದ್ಧ ನೀರು ಸಿಗದೇ ಕಳೆದ ಎಂಟು ವರ್ಷದಿಂದ ಜನರು ಪರದಾಟ ನಡೆಸುತ್ತಲೇ ಇದ್ದಾರೆ.

ಇದನ್ನೇ ಕೆಲವರು ಬಂಡವಾಳ ಮಾಡಿಕೊಂಡು ನೀರಿನ ಮಾರಾಟದ ದಂಧೆಗೆ ನಿಂತಿರೋದು ಒಂದೆಡೆಯಾದ್ರೆ, ಶುದ್ಧ ನೀರು ಸಿಗದೇ ಜನರು ವಿವಿಧ ಕಾಯಿಲೆಗಳಿಂದಲೂ ಬಳಲುತ್ತಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡೋಣ ಬನ್ನಿ...

ಕೆಟ್ಟು ಹೋಗಿರುವ ಕುಡಿಯುವ ನೀರಿನ ಶುದ್ಧ ಘಟಕಗಳು,ಟ್ರ್ಯಾಕ್ಟರ್ ಟ್ಯಾಂಕರ್ ಮೂಲಕ ನಡೆಯುತ್ತಿರುವ ನೀರು ಮಾರಾಟ ದಂಧೆ.ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮದಲ್ಲಿ. ಹೌದು. ಕಳೆದ ಎಂಟು ವರ್ಷದ ಹಿಂದೆ ಈ ಗ್ರಾಮಕ್ಕೆ ಮಲಪ್ರಭಾ ಬಲದಂಡೆ ಕಾಲುವೆಯಿಂದ ಕುಡಿಯುವ ಶುದ್ಧ ನೀರು ಒದಗಿಸಲು ಯೋಜನೆ ಹಾಕಿಕೊಳ್ಳಲಾಗಿತ್ತು.

ಅದರಂತೆ ಎಲ್ಲ ಕಾಮಗಾರಿ ಮುಗಿದು ಇನ್ನೇನು ಗ್ರಾಮಕ್ಕೆ ನೀರು ಬಂದೆ ಬಿಡ್ತು ಅನ್ನೋ ಸಂತಸದಲ್ಲಿ ಜನರಿದ್ದರು. ಆದರೆ, ಸುತ್ತಲಿನ ಮುತ್ತಲಿನ ಹಳ್ಳಿಗಳಿಗೆ ನೀಡಲಾಗುತ್ತಿರೋ ನೀರು ಈ ಗ್ರಾಮಕ್ಕೆ ಬರಲೇ ಇಲ್ಲ. ಇತ್ತ ಗ್ರಾಮದಲ್ಲಿರುವ ಕುಡಿಯುವ ಶುದ್ಧ ನೀರಿನ ಘಟಕಗಳು ಕೈಕೊಟ್ಟು ಮೂರು ವರ್ಷ ಕಳೆದಿದೆ. ಹೀಗಾಗಿ ಗ್ರಾಮಸ್ಥರು ಕೊಳವೆಬಾವಿಯ ನೀರು ಸೇವಿಸಿ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಅದಕ್ಕೆ ಕಾರಣ ಫ್ಲೋರೈಡ್ ನೀರು.

ಗ್ರಾಮದಲ್ಲಿ ಫ್ಲೋರೈಡ್ ಮಿಶ್ರಿತ ನೀರು ಇರುವುದರಿಂದ ಜನರಿಗೆ ಆರೋಗ್ಯದ ಸಮಸ್ಯೆ ಕಾಡುತ್ತಿದೆ. ಫ್ಲೋರೈಡ್‌ಯುಕ್ತ ನೀರು ಕುಡಿಯುವುದರಿಂದ ನಿಶಕ್ತರಾದಂತಾಗಿ, ಕೈ ಕಾಲುಗಳು ಹಿಡಿದುಕೊಂಡು ಸರಿಯಾಗಿ ನಡೆದಾಡಲು ಆಗುವುದಿಲ್ಲ. ಸರಿಯಾಗಿ ಕೆಲಸ ಮಾಡಲು ಆಗುವುದಿಲ್ಲ. ಅಲ್ಲದೇ ಚಿಕ್ಕ ಮಕ್ಕಳೂ ಸೇರಿ ಪ್ರತಿಯೊಬ್ಬರ ಕೈ ಕಾಲು, ನರ-ನಾಡಿಗಳು ಹಿಡಿದುಕೊಳ್ಳುತ್ತದೆ.

ಇಲ್ಲಿರೋ ಜನರಿಗೆ 40 ವರ್ಷ ಕಳೆದ್ರೆ, ಎಲುಬಿನ ಸಮಸ್ಯೆ ಹೇಳತೀರದ್ದು. ಕುಡಿಯುವ ಶುದ್ಧ ನೀರು ಸಿಗದೇ ಹಿನ್ನೆಲೆಯಲ್ಲಿ ಗ್ರಾಮದ ಕೆಲವು ಜನರು ತಮ್ಮ ಟ್ಯಾಂಕರ್ ಗಳ ಮೂಲಕ ಹುಬ್ಬಳ್ಳಿಯಿಂದ ಶುದ್ಧ ನೀರು ತರಿಸಿಕೊಂಡು ಗ್ರಾಮಸ್ಥರಿಗೆ ನೀರು ಸರಬರಾಜು ಮಾಡುತ್ತಿದ್ದಾರೆ. ಒಂದು ಕೊಡ ನೀರಿಗೆ ಐದರಿಂದ ಏಳು ರೂಪಾಯಿ ಚಾರ್ಜ್ ಮಾಡುವ ಟ್ಯಾಂಕರ್ ಮಾಲೀಕರು ದಿನಕ್ಕೆ ಮೂರು ಬಾರಿ ನೀರು ಸರಬರಾಜು ಮಾಡಿ, ಇದನ್ನೇ ಉದ್ಯೋಗವನ್ನಾಗಿಸಿಕೊಂಡಿದ್ದಾರೆ.

ಈ ಬಗ್ಗೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಕೇಳಿದ್ರೆ, ಕುಡಿಯುವ ಶುದ್ಧ ನೀರಿನ ಘಟಕಗಳ ನಿರ್ವಹಣೆಯನ್ನು ಸದ್ಯ ನಾವು ನೋಡಿಕೊಳ್ಳುತ್ತಿಲ್ಲ. ಘಟಕಗಳು ಕೆಟ್ಟಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ಈಗಾಗಲೇ ಮೇಲಾಧಿಕಾರಿಗಳಿಗೆ ಪತ್ರ ಕೂಡ ಬರೆದಿದ್ದೇವೆ. ಕುಡಿಯುವ ನೀರಿನಲ್ಲಿ ಫ್ಲೋರೈಡ್ ಅಂಶ ಇರುವ ಬಗ್ಗೆ ನೀರಿನ ಸ್ಯಾಂಪಲ್(ಮಾದರಿ)ಯನ್ನು ಪರೀಕ್ಷೆಗೆ ಕಳುಹಿಸಿದ್ದೇವೆ.ವರದಿ ಇನ್ನು ಬಂದಿಲ್ಲ ಅಂತಾರೆ.

ಸುಳ್ಳ ಗ್ರಾಮದಲ್ಲಿ ಮೂರು‌ ಕುಡಿಯುವ ನೀರಿನ ಶುದ್ಧ ಘಟಕಗಳು ಹಳ್ಳ ಹಿಡಿದು ಮೂರು ವರ್ಷ ಕಳೆದಿದೆ. ಮಲಪ್ರಭಾ ಬಲದಂಡೆ ಕಾಲುವೆಯಿಂದ ನೀರು ತರುವ ಯೋಜೆನೆ ಅರ್ಧಕ್ಕೆ ನಿಂತು ಎಂಟು ವರ್ಷ ಕಳೆದಿದೆ. ಗ್ರಾಮಸ್ಥರು ತಮ್ಮ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ.

ಇತ್ತ ನಿತ್ಯ ಶುದ್ಧ ನೀರಿನ ಮಾರಾಟ ಎಗ್ಗಿಲ್ಲದೇ ಸಾಗುತ್ತಿದೆ. ಕುಡಿಯುವ ನೀರಿಲ್ಲದ ಗ್ರಾಮಗಳಿಗೆ ಉಚಿತವಾಗಿ ನೀರು ಪೂರೈಕೆ ಮಾಡಬೇಕಾದ ಸರ್ಕಾರ, ಅಧಿಕಾರಿಗಳು ಜಾಣ ಕುರುತನ ತೋರುತ್ತಿದ್ದು, ದೇವರು ಕೊಟ್ಟರು ಪೂಜಾರಿ ಕೊಡುತ್ತಿಲ್ಲ ಅನ್ನೋ ಹಾಗಾಗಿದೆ ಗ್ರಾಮಸ್ಥರು ಪಾಡು. ಇನ್ನಾದರೂ ಅಧಿಕಾರಿಗಳು ಗ್ರಾಮದತ್ತ ಕಣ್ತೆರೆದು ನೋಡ್ತಾರಾ? ಕಾದು ನೋಡಬೇಕಿದೆ.

Edited By : Manjunath H D
Kshetra Samachara

Kshetra Samachara

13/01/2021 06:46 pm

Cinque Terre

38.87 K

Cinque Terre

15

ಸಂಬಂಧಿತ ಸುದ್ದಿ