ಹುಬ್ಬಳ್ಳಿ: ಆತ ದೇಶದ ಹಸಿವನ್ನು ನೀಗಿಸುವ ಅನ್ನದಾತ. ವರುಣನ ಅಬ್ಬರಕ್ಕೆ ಅಕ್ಷರಶಃ ತತ್ತರಿಸಿ ಹೋಗಿದ್ದಾನೆ. ಮನೆಯ ಮಗ ಉಂಡರೇ ಕೆಡುವುದಿಲ್ಲ,ಎಷ್ಟೇ ಮಳೆಯಾದರೇ ಕೆಡುವುದಿಲ್ಲ ಎಂಬುವಂತ ಮಾತು ಈಗ ಹುಸಿಯಾಗಿದ್ದು, ಮಳೆಗಾಗಿ ಮುಗಿಲು ನೋಡುತ್ತಿದ್ದ ಅನ್ನದಾತ ಇಂದು ಮಳೆಯಿಂದ ಮುಗ್ಗರಿಸಿ ಬೀಳುವಂತಾಗಿದೆ.
ಹೌದು..ಮಳೆರಾಯನ ಅಬ್ಬರಕ್ಕೆ ಅನ್ನದಾತ ನಲುಗಿ ಹೋಗಿದ್ದಾನೆ. ಬೆಳೆದ ಬೆಳೆಗಳು ಕೈಗೆ ಸೇರುವ ಮುನ್ನವೇ ಕಣ್ಣೆದುರಿನಲ್ಲಿಯೇ ಕೊಚ್ಚಿಕೊಂಡು ಹೋಗುತ್ತಿದ್ದರೂ ಕೂಡ ಅಸಹಾಯಕ ಸ್ಥಿತಿಯಲ್ಲಿ ಅನ್ನದಾತ ಕಣ್ಣೀರು ಹಾಕುತ್ತಿದ್ದಾನೆ. ಅಯ್ಯೋ ಮಳೆರಾಯ ನಿನಗೆ ಕರುಣೆ ಬಾರದೇ ಎಂದು ಅಕ್ಷರಶಃ ಕಣ್ಣೀರು ಸುರಿಸುವಂತಾಗಿದೆ.
ಧಾರವಾಡ ಜಿಲ್ಲೆಯಲ್ಲಿ ಬಹುತೇಕ ಕಡೆಗಳಲ್ಲಿ ಗೋವಿನಜೋಳ ನೆಲಕಚ್ಚಿ ರೈತ ಕಂಗಾಲಾಗಿದ್ದಾನೆ. ರಾಜ್ಯದಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆ ಧಾರವಾಡ ಜಿಲ್ಲೆಯಲ್ಲೂ ಸಾಕಷ್ಟು ಅನಾಹುತ ಸೃಷ್ಟಿಸಿದೆ. ಕಳೆದ ಮೂರು ನಾಲ್ಕು ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದ ಈಗ ಅನ್ನದಾತ ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದಾನೆ.
ಮಳೆಯಿಂದ ಧಾರವಾಡ ಜಿಲ್ಲೆಯ ಕುಂದಗೋಳ, ಕಲಘಟಗಿ ತಾಲೂಕಿನಲ್ಲಿ ಅಪಾರ ಪ್ರಮಾಣದ ಬೆಳೆ ಮಳೆಗೆ ಕೊಚ್ಚಿ ಹೋಗಿವೆ. ಕಲಘಟಗಿಯ ತಾಲೂಕಿನ ಗಂಭ್ಯಾಪುರ ಗ್ರಾಮದ ಬಳಿಯ ಬೇಡ್ತಿ ಹಳ್ಳದ ಪ್ರವಾಹದಿಂದ ಅಪಾರ ಪ್ರಮಾಣದ ಮೆಕ್ಕಜೋಳ ಬೆಳೆ ಕೊಚ್ಚಿಹೋಗಿವೆ. ಇದರಿಂದ ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುವಂತಾಗಿದೆ. ಭಾರಿ ಮಳೆಗೆ ಕೆರೆ ತುಂಬಿ ಬೆಳೆ ಕೊಚ್ಚಿ ಹೋಗಿವೆ. ಅಲ್ಲದೇ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ನೀರಸಾಗರ ಜಲಾಶಯದ ನೀರು ಹೆಚ್ಚಿದ್ದರಿಂದ ಪಕ್ಕದ ಜಮೀನುಗಳಿಗೆ ನೀರು ನುಗ್ಗಿದ್ದು, ಎಮ್ಮೆಟ್ಟಿ, ನೀರಸಾಗರ, ಮುತ್ತಗಿ, ಗಂಬ್ಯಾಪುರ ಗ್ರಾಮಗಳ ರೈತರು ಸಂಕಷ್ಟ ಅನುಭವಿಸುವಂತಾಗಿದೆ. ನೀರು ಹೆಚ್ಚಾಗಿದ್ದರಿಂದ ಹೊಲಗಳಲ್ಲಿ ಬೆಳೆದಿದ್ದ ಬೆಳೆ ಸಂಪೂರ್ಣ ನಾಶವಾಗಿವೆ. ಭತ್ತ, ಗೋವಿನ ಜೋಳ, ಸೋಯಾಬಿನ್ ಸೇರಿ ಇತರೆ ಬೆಳೆಗಳು ಸಂಪೂರ್ಣ ಹಾನಿಯಾಗಿದ್ದು, ಬೆಳೆ ಬೆಳೆದು ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದ ರೈತನಿಗೆ ಮಳೆರಾಯ ಶಾಕ್ ನೀಡಿದ್ದಾನೆ.
ಇನ್ನಾದರೂ ಆಳುವ ಸರ್ಕಾರ ಅನ್ನದಾತನ ಅಳಲನ್ನು ಕೇಳುವ ಕಾರ್ಯವನ್ನು ಮಾಡುವ ಮೂಲಕ ರೈತರಿಗೆ ಬೆಳೆ ಪರಿಹಾರವನ್ನು ಒದಗಿಸಿ ಕಣ್ಣೀರು ಒರೆಸುವ ಕಾರ್ಯವನ್ನು ಮಾಡಬೇಕಿದೆ.
Kshetra Samachara
19/11/2021 03:45 pm