ಧಾರವಾಡ: ಕೊರೊನಾ ಸೋಂಕಿಗೆ ಒಳಗಾಗಿ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ (ಎಬಿಎಆರ್‌ಕೆ) ಯೋಜನೆಯಡಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ಕೋಟಾದಲ್ಲಿ ಚಿಕಿತ್ಸೆ ಪಡೆದ ರೋಗಿಗಳಿಂದ ಹೆಚ್ಚುವರಿಯಾಗಿ ಶುಲ್ಕ ಪಡೆದ ಪ್ರಕರಣಗಳನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಕುಂದುಕೊರತೆ ಪರಿಹಾರ ಸಮಿತಿ ಅಧ್ಯಕ್ಷರೂ ಆಗಿರುವ ನಿತೇಶ ಪಾಟೀಲ ವಿಚಾರಣೆ ನಡೆಸಿ, ವಿವಿಧ ಪ್ರಕರಣಗಳಲ್ಲಿ ರೋಗಿಗಳಿಂದ ಹೆಚ್ಚುವರಿಯಾಗಿ ಪಡೆದಿದ್ದ 19 ಲಕ್ಷ ರೂಪಾಯಿಗಳನ್ನು ರೋಗಿಗಳಿಗೆ ಮರು ಪಾವತಿಸಲು ಖಾಸಗಿ ಆಸ್ಪತ್ರೆಗಳಿಗೆ ಆದೇಶಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ಇಂದು ಸಂಜೆ ಎಬಿಎಆರ್‌ಕೆ ಕ್ಲೇಮ್‍ಗಳ ಕುರಿತು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (ಎಸ್.ಎ.ಎಸ್.ಟಿ.)ನ ಸಹಾಯವಾಣಿ ಕೇಂದ್ರ ಮತ್ತು ಲಿಖಿತ ದೂರುಗಳ ಮೂಲಕ ದಾಖಲಾಗಿದ್ದ 80 ಪ್ರಕರಣಗಳನ್ನು ದೂರುದಾರರು ಹಾಗೂ ಆಸ್ಪತ್ರೆಗಳ ವೈದ್ಯಾಧಿಕಾರಿಗಳು, ಆಡಳಿತಾಧಿಕಾರಿಗಳ ಸಮ್ಮುಖದಲ್ಲಿ ವಿಚಾರಣೆ ನಡೆಸಿ, ಈ ಆದೇಶ ನೀಡಿದರು.
ಕೋವಿಡ್ ಮೊದಲ ಮತ್ತು ಎರಡನೇ ಅಲೆಗಳ ಸಂದರ್ಭದಲ್ಲಿ ಚಿಕಿತ್ಸೆಗೆ ಸರ್ಕಾರ ನಿಗದಿ ಪಡಿಸಿದ ಪ್ರಮಾಣದಲ್ಲಿ ಶುಲ್ಕ ವಿಧಿಸಲು ಸೂಚಿಸಲಾಗಿತ್ತು. ಎಬಿಎಆರ್‌ಕೆ ಅಡಿ ರೋಗಿ ದಾಖಲಾದರೆ ಅಂತಹ ವ್ಯಕ್ತಿಗಳಿಂದ ಯಾವುದೇ ಶುಲ್ಕ ಪಡೆಯಬಾರದು ಎಂದು ನಿರ್ದೇಶನ ನೀಡಲಾಗಿತ್ತು. ಕೆಲವು ಪ್ರಕರಣಗಳಲ್ಲಿ ರೋಗಿ ದಾಖಲಾದ ಪ್ರಾರಂಭದ ಕೆಲದಿನಗಳ ನಂತರ ಎಬಿಎಆರ್‌ಕೆ ಅನುಮೋದನೆ ಬಂದಿರುತ್ತದೆ. ಅಂತಹ ಸಂದರ್ಭಗಳಲ್ಲಿ ಅನುಮೋದನೆಗೆ ಪೂರ್ವದ ಅವಧಿಯ ಚಿಕಿತ್ಸೆಗೆ ಮಾತ್ರ ಶುಲ್ಕ ಪಡೆಯಬೇಕು. ಜಿಲ್ಲೆಯ ಕೆಲವು ಆಸ್ಪತ್ರೆಗಳು ಎಬಿಎಆರ್‌ಕೆ ಹಾಗೂ ರೋಗಿ ಎರಡೂ ಕಡೆಗಳಿಂದಲೂ ಹಣ ಪಡೆದಿವೆ. ಅಂತಹ ಪ್ರಕರಣಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಹುಬ್ಬಳ್ಳಿಯ ರೋಗಿಯೊಬ್ಬರಿಗೆ 4 ಲಕ್ಷ ರೂಪಾಯಿ, ಸವದತ್ತಿಯ ವ್ಯಕ್ತಿಯೊಬ್ಬರಿಗೆ 92,125 ರೂಪಾಯಿ ಹಾಗೂ ಮತ್ತೊಂದು ಪ್ರಕರಣದಲ್ಲಿ 25 ಸಾವಿರ ರೂಪಾಯಿಗಳನ್ನು ಮರು ಪಾವತಿಸಲು ಸೂಚಿಸಿದರು.
ಖಾಸಗಿ ಆಸ್ಪತ್ರೆಯೊಂದು ಸ್ವಯಂ ಪ್ರೇರಿತವಾಗಿ 43 ಪ್ರಕರಣಗಳಲ್ಲಿ 14 ಲಕ್ಷ ರೂಪಾಯಿ ಪಾವತಿಸಿರುವುದಾಗಿ ಸಭೆಗೆ ಮಾಹಿತಿ ನೀಡಿದಾಗ ಜಿಲ್ಲಾಧಿಕಾರಿಗಳು ಅವರ ಕಾರ್ಯವನ್ನು ಅಭಿನಂದಿಸಿದರು. ಕೋವಿಡ್-19 ಸಾಂಕ್ರಾಮಿಕ ತೀವ್ರವಾಗಿದ್ದ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಗಳೊಂದಿಗೆ ಖಾಸಗಿ ಆಸ್ಪತ್ರೆಗಳು ಕೂಡ ಸೇವೆ ನೀಡಿವೆ. ಕೆಲವೆಡೆ ಹೆಚ್ಚುವರಿ ಶುಲ್ಕ ವಸೂಲಿಯಾಗಿರುವ ಬಗ್ಗೆ ಬಂದಿರುವ ದೂರುಗಳನ್ನು ಪರಾಮರ್ಶೆ ಮಾಡಲಾಗಿದೆ. ಆಸ್ಪತ್ರೆಗಳು ಇನ್ನುಮುಂದೆ ಇಂತಹ ಕೃತ್ಯಗಳಿಗೆ ಅವಕಾಶ ನೀಡಬಾರದು. ಈಗ ಕೋವಿಡ್ ಸಾಂಕ್ರಾಮಿಕ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ.
ಎಬಿಎಆರ್‌ಕೆ ಅಡಿ ಕೋವಿಡ್ ಅಲ್ಲದೇ ಬೇರೆ ಚಿಕಿತ್ಸೆಗಳಿಗೆ ದಾಖಲಾಗುವ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿ, ಸಾರ್ವಜನಿಕ ಆರೋಗ್ಯ ಕಾಪಾಡಿ ವೈದ್ಯಕೀಯ ವೃತ್ತಿಯ ಘನತೆ, ಜವಾಬ್ದಾರಿ ಹೆಚ್ಚಿಸಲು ಖಾಸಗಿ ಆಸ್ಪತ್ರೆಗಳಿಗೆ ಜಿಲ್ಲಾಧಿಕಾರಿಗಳು ಮನವಿ ಮಾಡಿದರು.
Kshetra Samachara
10/03/2022 08:19 pm