ಕೊರೊನಾದಿಂದ ಈವರೆಗೆ ನಷ್ಟದಲ್ಲಿದ್ದ ವಾಯುವ್ಯ ಸಾರಿಗೆ ಸಂಸ್ಥೆಯ ಬಸ್‌ಗಳು ಇದೀಗ ಸಂಪೂರ್ಣವಾಗಿ ರಸ್ತೆಗಿಳಿದಿದ್ದರೂ ಸಂಸ್ಥೆಯ ಆರ್ಥಿಕ ಪರಿಸ್ಥಿತಿ ಮಾತ್ರ ಇನ್ನೂ ಸುಧಾರಿಸಿಲ್ಲ. ಸಾಲದೆಂಬಂತೆ ಹಗಲಿರುಳು ದುಡಿಯುತ್ತಿರುವ ಸಂಸ್ಥೆಯ ನೌಕರರಿಗೆ ಇದುವರೆಗೂ ಪೂರ್ಣಪ್ರಮಾಣದ ಸಂಬಳ ಸಿಗದೇ ಅರ್ಧ ಸಂಬಳ ಪಡೆಯುವ ಪರಿಸ್ಥಿತಿ ಎದುರಾಗಿದೆ.
ಹೌದು.. ಉತ್ತರ ಕರ್ನಾಟಕ ಭಾಗದ ಒಂಬತ್ತು ವಿಭಾಗಗಳನ್ನೊಳಗೊಂಡ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಆರ್ಥಿಕ ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ. ಕಳೆದೆರಡು ವರ್ಷದಿಂದ ಕೊರೊನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಆಗಿದ್ದರಿಂದ ಸಂಸ್ಥೆಯ ಬಸ್‌ಗಳು ರಸ್ತೆಗಿಳಿದಿರಲಿಲ್ಲ. ಆದ್ರೆ ಕೊರೊನಾ ನಂತರದ ವೇಳೆ ಅಂದರೆ ಒಂದು ವರ್ಷದಿಂದ ಪೂರ್ಣ ಪ್ರಮಾಣದಲ್ಲಿ ಬಸ್‌ಗಳು ರಸ್ತೆಗಿಳಿದು ಸಂಸ್ಥೆಯ ಬಸ್ ಸಂಚಾರ ಸಂಪೂರ್ಣವಾಗಿ ಆ್ಯಕ್ಟಿವ್ ಆಗಿವೆ. ಆದ್ರೆ ಸಂಸ್ಥೆಯಲ್ಲಿ ಹಗಲಿರುಳು ಕಾರ್ಯನಿರ್ವಹಿಸೋ ಸಿಬ್ಬಂದಿಗೆ ಮಾತ್ರ ಪೂರ್ಣ ಪ್ರಮಾಣದ ಸಂಬಳ ಸಿಗದೇ ಒದ್ದಾಡುವಂತಾಗಿದೆ. ಈ ಬಗ್ಗೆ ಸಿಬ್ಬಂದಿ ಹಾಗೂ ಅಧಿಕಾರಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಸರ್ಕಾರ ಮಾತ್ರ ಸಿಬ್ಬಂದಿಯ ಈ ಸಮಸ್ಯೆಗೆ ಪರಿಹಾರ ಒದಗಿಸಲು ಮುಂದಾಗುತ್ತಿಲ್ಲ ಎಂಬುದು ಸಂಸ್ಥೆಯ ನೌಕರರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನೂ ಒಂದೆಡೆ ಕಳೆದ ಮಾರ್ಚ್ ತಿಂಗಳಿನಿಂದ ಅರ್ಧ ಸಂಬಳದಲ್ಲೇ ಜೀವನ ನಡೆಸುತ್ತಿರೋ ಸಿಬ್ಬಂದಿಗಳ ಗೋಳು ಒಂದೆಡೆಯಾದ್ರೆ ಈವರೆಗೂ ಸಂಸ್ಥೆಗೆ ನಿವೃತ್ತ ನೌಕರರ ಹಣ, ಬಸ್ ಪಾಸ್ ಬಾಕಿ, ಸಂಸ್ಥೆಯ ನಿರ್ವಹಣಾ ವೆಚ್ಚ ಸೇರಿದಂತೆ ವಿವಿಧ ವಿಭಾಗಗಳ ಒಟ್ಟು 900 ಕೋಟಿ ಬಾಕಿ ಸರ್ಕಾರದಿಂದ ಬರಬೇಕಿದೆ. ಈ ಕುರಿತು ಸಂಸ್ಥೆಯ ಅಧಿಕಾರಿಗಳು ಸರ್ಕಾರದ ಗಮನ ಸೆಳೆಯುವಲ್ಲಿ ಅದೆಷ್ಟೋ ಬಾರಿ ಪ್ರಯತ್ನ ಮಾಡಿದ್ರೂ ಸರ್ಕಾರ ಮಾತ್ರ ಸಂಸ್ಥೆಗೆ ನೀಡಬೇಕಾದ ಬಾಕಿ ಹಣವನ್ನು ಮಾತ್ರ ಬಿಡುಗಡೆ ಮಾಡುತ್ತಿಲ್ಲ. ಹೀಗಾಗಿ ಸಂಸ್ಥೆ ದಿನವೊಂದಕ್ಕೆ ಸುಮಾರು 1.5 ಕೋಟಿಯಷ್ಟು ನಷ್ಟ ಅನುಭವಿಸುತ್ತಲೇ ಬಂದರೂ ಸರ್ಕಾರ ಮಾತ್ರ ಕಣ್ತೆರೆಯುತ್ತಿಲ್ಲ. ಇದರಿಂದಾಗಿ ಲಾಕ್ ಡೌನ್ ನಂತರವೂ ಸಂಸ್ಥೆ ಆರ್ಥಿಕ ಪರಿಸ್ಥಿತಿಯನ್ನ ನಿಭಾಯಿಸುತ್ತಲೇ ಮುನ್ನಡೆಯುತ್ತಿದ್ದರೂ ರಾಜ್ಯ ಸರ್ಕಾರ ತಲೆಕೆಡಿಸಿಕೊಳ್ಳದಿರುವುದು ನಿಜಕ್ಕೂ ಸಂಸ್ಥೆಯ ಸಿಬ್ಬಂದಿ ಹಾಗೂ ಅಧಿಕಾರಿಗಳ ನಿದ್ದೆಗೆಡಿಸಿದೆ.
ಹಗಲಿರುಳು ಸಾರ್ವಜನಿಕ ಸೇವೆ ಒದಗಿಸುತ್ತ ಜನಸಾಮಾನ್ಯರ ಹಿತಕಾಪಾಡುತ್ತಿರುವ ವಾಯುವ್ಯ ಸಾರಿಗೆ ಸಂಸ್ಥೆಯ ಆರ್ಥಿಕ ಪರಿಸ್ಥಿತಿಯನ್ನ ನೋಡಿಯೂ ರಾಜ್ಯ ಸರ್ಕಾರ ಕಿಂಚಿತ್ತೂ ಗಮನ ವಹಿಸದಿರುವುದು ನಿಜಕ್ಕೂ ಬೇಸರದ ಸಂಗತಿ. ಇನ್ನಾದ್ರೂ ರಾಜ್ಯ ಸರ್ಕಾರ ಸಂಸ್ಥೆಯ ಸಿಬ್ಬಂದಿಗಳ ಸಮಸ್ಯೆ ಹಾಗೂ ಸಂಸ್ಥೆಯ ಆರ್ಥಿಕ ಪರಿಸ್ಥಿತಿಯನ್ನ ಅವಲೋಕಿಸಿ ಸಮಸ್ಯೆಯನ್ನ ಬಗೆಹರಿಸುವಲ್ಲಿ ಮುಂದಾಗಬೇಕಿದೆ.
Kshetra Samachara
30/05/2022 03:59 pm