ಅರೆರೆ... ನೀವು ಸರ್ಕಸ್ ನೋಡೋಕೆ ಜಂಬೋ ಸರ್ಕಸ್, ಸಿಟಿ ಸರ್ಕಸ್ ಅಂತ ಹೋಗ್ತಿರಾ. ಅಲ್ಲಿ ಹೋದರೇ ನಿಜಕ್ಕೂ ದುಡ್ಡು ವೇಸ್ಟ್. ಯಾಕೆಂದ್ರೆ ನಾವು ಹಳ್ಳಿ ಜನರ ಸರ್ಕಸ್ ತೋರಿಸ್ತೀವಿ ಬನ್ನಿ...!
ಈ ದೃಶ್ಯ ನೋಡಿ, ಕುಡಿಯುವ ನೀರಿಗಾಗಿ ಹೊಟ್ಟೆಗೆ ಬಟ್ಟೆ ಕಟ್ಟಿಕೊಂಡು ಸಾಹಸ ಮಾಡುತ್ತಿರುವ ಮಹಿಳೆ. ಮನೆಯಲ್ಲಿ ಮೊಮ್ಮಕ್ಕಳೊಂದಿಗೆ ಹಾಯಾಗಿ ಇರಬೇಕಾದ ವೃದ್ಧನ ಸಾಹಸ... ಇದೆಲ್ಲದಕ್ಕೂ ಸಾಕ್ಷಿಯಾಗಿದ್ದು, ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಗ್ರಾಮ. ಹೌದು... ಶಿರಗುಪ್ಪಿ ಪ್ಲಾಟ್ ನಿರ್ಮಾಣವಾಗಿ 30 ವರ್ಷಗಳೇ ಕಳೆದರೂ ಮೂಲ ಸೌಕರ್ಯಗಳೇ ಇಲ್ಲ. ಇಲ್ಲಿ ದಿನವೂ ಜನರು ದೂರದ ಕೆರೆಯಿಂದ ನೀರನ್ನು ಹೊತ್ತು ತರಬೇಕಿದೆ. ಆದರೆ. ಆ ದಾರಿ ನೋಡಿದರೆ ನಮಗೆ ಅಯ್ಯೋ ಅನ್ನಿಸದಿರದು.
ಕಿರಿದಾದ ಇಕ್ಕೆಲದಲ್ಲಿ ತಳ್ಳಿಕೊಂಡು ನೀರನ್ನು ತರುವ ಜನರು ನಿಜಕ್ಕೂ ದೊಡ್ಡ ಸರ್ಕಸ್ ಮಾಡಬೇಕಾಗಿದೆ. ಸ್ವಲ್ಪ ಯಾಮಾರಿದರೂ ಅಪಾಯ ಮಾತ್ರ ಕಟ್ಟಿಟ್ಟ ಬುತ್ತಿ. ಹೀಗೆ ಹಲವು ವರ್ಷಗಳಿಂದ ಅವ್ಯವಸ್ಥೆಯಿದ್ದರೂ ಸ್ಥಳೀಯಾಡಳಿತವಾಗಲಿ, ಜಿಲ್ಲಾಡಳಿತವಾಗಲಿ, ಜನಪ್ರತಿನಿಧಿಗಳಾಗಲಿ ಕಿಂಚಿತ್ತೂ ಕಾಳಜಿ ವಹಿಸಿಲ್ಲ.
ನೂರಕ್ಕೂ ಹೆಚ್ಚು ಕುಟುಂಬ ಇದೇ ಕೆರೆ ನೀರನ್ನು ಕುಡಿದು ಬದುಕುತ್ತಿವೆ. ಹೀಗಿದ್ದರೂ ಹೋಗಿ- ಬರಲು ಸೂಕ್ತ ದಾರಿ ಇಲ್ಲದೆ ನೀರಿನ ಗಾಡಿಯನ್ನು ತಳ್ಳಿಕೊಂಡೇ ಸರ್ಕಸ್ ಮಾಡುವಂತಾಗಿದೆ. ಒಟ್ಟಿನಲ್ಲಿ ಅದೆಷ್ಟೋ ಯೋಜನೆ ಜಾರಿಗೆ ತಂದರೂ ಹಳ್ಳಿಗರ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ. ಇನ್ನಾದರೂ ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಬೇಕು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
02/07/2022 07:23 pm