ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಖಜಾನೆಯೇ ಖಾಲಿಯಾಗಿದ್ದು, ಸಿಬ್ಬಂದಿ ಸಂಬಳಕ್ಕೂ ಸರ್ಕಾರದ ಮುಂದೆ ಕೈಚಾಚುವ ಸ್ಥಿತಿ ಬಂದಿದೆ.
ಸದ್ಯ ಅಮೃತ ಮಹೋತ್ಸವದ ಹೊಸ್ತಿಲಲ್ಲಿರೋ ಈ ವಿಶ್ವವಿದ್ಯಾಲಯದ ಬರೊಬ್ಬರಿ 185 ಕೋಟಿ ರೂಪಾಯಿ ಅನುದಾನ ಉಳಿಸಿಕೊಂಡಿದೆ ಸರಕಾರ. ಕಳೆದ ನಾಲ್ಕು ವರ್ಷದಿಂದ ಯಾವುದೇ ವಿಶೇಷ ಅನುದಾನವೂ ಬಿಡುಗಡೆಯಾಗಿಲ್ಲ. ಇದರಿಂದಾಗಿ ಪ್ರತಿ ತಿಂಗಳ ವಿದ್ಯುತ್ ಬಿಲ್, ನೀರು, ವಾಹನ ನಿರ್ವಹಣೆ, ಕಚೇರಿ ಖರ್ಚು ಸೇರಿ ಒಟ್ಟು ಆರು ಕೋಟಿ ರೂಪಾಯಿ ಬರುತ್ತಿದ್ದು, ಇದನ್ನು ಸರಿದೂಗಿಸುವುದಕ್ಕೂ ಸಹ ಪರದಾಡುತ್ತಿದ್ದಾರೆ.
ಆದಷ್ಟು ಬೇಗ ಅನುದಾನ ನೀಡುವಂತೆ ವಿನಂತಿಸಿದ್ದರೂ ಸರಕಾರ ಗಪ್ ಚುಪ್. ಸರ್ಕಾರದಿಂದ ಅನುದಾನ ಬರುವ ನಿರೀಕ್ಷೆಯಲ್ಲಿದೆ ಎಂದು ಕವಿವಿ ಕುಲಪತಿ ಪ್ರೊ.ಕೆ.ಬಿ.ಗುಡಸಿ ಹೇಳುತ್ತಾರೆ.
ಸದ್ಯ ವಿಶ್ವವಿದ್ಯಾಲಯದ ವ್ಯಾಪ್ತಿಯ ಕಾಲೇಜುಗಳಲ್ಲಿ ಶೇಕಡಾ 70ರಷ್ಟು ಅತಿಥಿ ಉಪನ್ಯಾಸಕರೇ ಇದ್ದಾರೆ. ಅವರೆಲ್ಲರ ಸಂಬಳದ ಮೊತ್ತವೇ ಪ್ರತಿ ತಿಂಗಳು 1 ಕೋಟಿ ರೂಪಾಯಿ ಆಗುತ್ತದೆ. ಈ ಸಂಬಳವನ್ನು ವಿಶ್ವವಿದ್ಯಾಲಯ ತನ್ನಲ್ಲಿರೋ ಆರ್ಥಿಕ ಸಂಪನ್ಮೂಲದ ಮೂಲಕವೇ ಕೊಡಬೇಕು. ಆದ್ರೆ ತನ್ನಲ್ಲಿರೋ ಸಂಪನ್ಮೂಲವನ್ನೂ ಸಹ ಸರ್ಕಾರದಿಂದ ಬರಬೇಕಿರೋ ಬಾಕಿಗೆ ಸರಿದೂಗಿಸಿರೋ ಹಿನ್ನೆಲೆ ಈಗ ಪ್ರತಿ ತಿಂಗಳು ಅತಿಥಿ ಉಪನ್ಯಾಸಕರ ಸಂಬಳ 15 ರಿಂದ 20ನೇ ದಿನಾಂಕದವರೆಗೂ ಆಗುತ್ತಿದ್ದು, ಇದು ಅತಿಥಿ ಉಪನ್ಯಾಸಕರಿಗೂ ಪರದಾಟ ತಂದಿಟ್ಟಿದೆ.
ಹೀಗಾಗಿ ಅತಿಥಿ ಉಪನ್ಯಾಸಕರು ಈಗಗಾಲೇ ನಾಲ್ಕೈದು ಸಲ ಹೋರಾಟ, ನಿರಂತರ ಧರಣಿಗಳನ್ನು ಸಹ ಮಾಡಿದ್ದಾರೆ. ಆದರೂ ಪ್ರಯೋಜನವಾಗಿಲ್ಲ. ಹೀಗಾಗಿ ನಾಲ್ಕು ಜಿಲ್ಲೆಯ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹಾಕಿ ಆದಷ್ಟು ಬೇಗ ಅನುದಾನ ಕೊಡಿಸಬೇಕು. ಯಾಕಂದ್ರೆ ಇದರ ನೇರ ಪರಿಣಾಮ ನಮ್ಮ ಮೇಲೆ ಆಗುತ್ತಿದೆ ಅಂತ ಗೋಗರೆಯುತ್ತಿದ್ದಾರೆ.
Kshetra Samachara
30/07/2022 07:48 pm