ವರದಿ: ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್
ಕುಂದಗೋಳ : ಈ ಮಹಿಳೆಯರ ಸಂಭ್ರಮ ಸಡಗರದ ಹಬ್ಬ, ಗೌರಿ ಹುಣ್ಣಿಮೆ ಬಂತೆಂದ್ರೇ ಸಾಕು ಸಕ್ಕರೆ ಗೊಂಬೆಗಳ ತಯಾರಿ ಜೋರಾಗಿ ಬಿಡತ್ತೇ, ಅದರಲ್ಲೂ ಭಿನ್ನ ವಿಭಿನ್ನ ಎನಿಸುವ ಸಕ್ಕರೆ ಗೊಂಬೆಗಳು ಅಂದ್ರೇ ಈ ಮಹಿಳೆಯರಿಗೆ ಇನ್ನೂ ಅಚ್ಚು ಮೆಚ್ಚು.
ಹಾಗೇ ಬಿನ್ನ ವಿಭಿನ್ನ ಸಕ್ಕರೆ ಗೊಂಬೆಗಳನ್ನು ತಯಾರಿ ಮಾಡುತ್ತಾ ಸತತ ಐವತ್ತು ವರ್ಷಗಳಿಂದ ಕುಂದಗೋಳ ಪಟ್ಟಣವಷ್ಟೇ ಅಲ್ಲದೇ ರಾಜ್ಯಾದ್ಯಂತ ಯಲಿಗಾರ ಕುಟುಂಬಸ್ಥರು ಹೆಸರಾಗಿದ್ದಾರೆ.
ಹೌದು ! ನೀವೂ ಊಹಿಸಲು ಸಾಧ್ಯವಿರದ ಅಂದ್ರೇ ಅಂಬಾಸಿಡರ್ ಕಾರು, ಬುಲೆಟ್ ಬೈಕ್, ಓಂ, ಹಣಮಂತ, ಗಿಳಿ, ನವಿಲು, ಬಾತುಕೋಳಿ, ಈಶ್ವರ, ಟಿವ್ಹಿ, ಆನೆ, ರೈತರು ಬಿತ್ತುವ ಕೂರಿಗೆ, ಬಸವಣ್ಣ, ಪರಮೇಶ್ವರನ ಮೂರ್ತಿಗಳನ್ನು ಸಕ್ಕರೆಯಲ್ಲೇ ಈ ಯಲಿಗಾರ ಕುಟುಂಬಸ್ಥರು ತಯಾರಿ ಮಾಡ್ತಾರೆ.
ಇನ್ನೂ ವಿಶೇಷ ಅಂದ್ರೇ, ನೀವೂ ಒಂದು ಕಿಲೋ ಸಕ್ಕರೆ ಆರತಿ ಖರೀದಿ ಮಾಡಿದ್ರೇ, ಒಂದು ನೂರು ಸಕ್ಕರೆ ಗೊಂಬೆಗಳು ನಿಮಗೆ ತೂಕಕ್ಕೆ ಸಿಕ್ತವೆ. ಅಷ್ಟು ಚಿಕ್ಕ ಅಂದ್ರೇ ಎರೆಡು ಸೆಂಟಿಮೀಟರ್ ಗಾತ್ರದ ಗೊಂಬೆಗಳ ಸಕ್ಕರೆ ಅಚ್ಚು ಇವರಲ್ಲಿದ್ದು ಸಂಪೂರ್ಣ ಕುಟುಂಬದವರಷ್ಟೇ ಸಕ್ಕರೆ ಗೊಂಬೆ ತಯಾರಿ ಮಾಡಿ ಈ ಬಾರಿ ಕೆಜಿ 160 ರೂಪಾಯಿ ಬೆಲೆ ನಿಗದಿ ಮಾಡಿ ಮಾರಾಟ ಮಾಡುತ್ತಿದ್ದಾರೆ.
ಸಕ್ಕರೆ ಆರತಿ ತಯಾರಿಕೆಯಲ್ಲಿ ಯಾವುದೇ ಕೆಮಿಕಲ್ಸ್ ಬಳಸದ ಇವರು ನಿಂಬೆ ರಸ, ಹಾಗೂ ಅಡುಗೆ ಬಳಕೆ ಬಣ್ಣ ಮಾತ್ರ ಬಳಸಿ ಇಷ್ಟು ಅಂದ ಚೆಂದದ ಗೊಂಬೆ ಮಾಡುತ್ತಾ ಹೆಸರಾಗಿದ್ದು, ಕರ್ನಾಟಕ ರಾಜ್ಯದ ಮೂಲೆ ಮೂಲೆಯಿಂದ ಇವರ ಮನೆಗೆ ಆರ್ಡರ್ ಹುಡುಕಿ ಬಂದಿವೆ.
ಈಗಾಗಲೇ ಮದುವೆ ನಿಶ್ಚಯ ಮಾಡಿದವರು ವಧುವಿಗೆ ಕೊಡಲು ಹತ್ತು, ಹದಿನೈದು ಕೆಜಿವರೆಗೆ ಸಕ್ಕರೆ ಗೊಂಬೆ ಆರ್ಡರ್ ಮಾಡಿದ್ದು, ಗೊಂಬೆಕೊಳ್ಳಲು ಗ್ರಾಹಕರ ಸಂಖ್ಯೆ ಶಿವಾನಂದ ಯಲಿಗಾರ ಮನೆ ಕಡೆ ಹೆಚ್ಚುತ್ತಲೆ ಇದೆ.
Kshetra Samachara
18/11/2021 09:14 pm