ಹುಬ್ಬಳ್ಳಿ: ಕೊರೋನಾ ವೈರಸ್ ಬಂದಿದ್ದೇ ಬಂದಿದ್ದು,ಎಲ್ಲ ಆರ್ಥಿಕ ಚಟುವಟಿಕೆಗಳ ಮೇಲೆಯೂ ಕೂಡ ಹೊಡೆತ ಬಿದ್ದಿದೆ. ಆದ್ರೇ ಕೊರೋನಾ ವೈರಸ್ ಹರಡುವಿಕೆಯ ಭೀತಿಯಲ್ಲಿ ನ್ಯೂ ಇಯರ್ ಪಾರ್ಟಿ ಮಾಡದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಿದರೂ ಕೂಡ ಮದ್ಯ ಪ್ರೀಯರು ಮಾತ್ರ ತಮ್ಮ ಮೋಜಿ ಮಸ್ತಿಗೆ ಯಾವುದೇ ಹಿನ್ನಡೆಯನ್ನು ಮಾಡದೇ ಹೊಸ ವರ್ಷ ಆಚರಿಸಿದ್ದು,ಕಳೆದ ವರ್ಷಕ್ಕಿಂತ ಈ ವರ್ಷ ದಾಖಲೆಯ ಮದ್ಯ ಮಾರಾಟವಾಗಿದೆ.
2019ರ ಡಿಸೆಂಬರ್ ತಿಂಗಳಿ ನಲ್ಲಿ 1,41,961 ಪೆಟ್ಟಿಗೆ ಮದ್ಯ ಮಾರಾಟವಾಗಿತ್ತು. 2020ರ ಡಿಸೆಂಬರ್‌ನಲ್ಲಿ 1,50,754 ಪೆಟ್ಟಿಗೆ ಮದ್ಯ ಮಾರಾಟವಾಗಿದೆ. 8,793 ಪೆಟ್ಟಿಗೆ ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ. 76,599 ಪೆಟ್ಟಿಗೆ ಬಿಯರ್ ಮಾರಾಟವಾಗಿದ್ದರೆ, 81,226 ಪೆಟ್ಟಿಗೆ ಈ ಬಾರಿ ಮಾರಾಟವಾಗಿದೆ.
ಹೊಸ ವರ್ಷದ ಮುನ್ನಾ ದಿನವಾದ ಡಿ.31ರಂದು 7,222 ಪೆಟ್ಟಿಗೆ ಮದ್ಯವನ್ನು ಬಾರ್ ಶಾಪ್‌ನವರು ಖರೀದಿಸಿದ್ದಾರೆ. ಕಳೆದ ವರ್ಷ 6,206 ಪೆಟ್ಟಿಗೆ ಖರೀದಿಸಿದ್ದರು. ಈ ವರ್ಷ 4,538 ಬಿಯರ್ ಪೆಟ್ಟಿಗೆ ಇದ್ದರೆ, ಕಳೆದ ವರ್ಷ 3,011 ಪೆಟ್ಟಿಗೆ ಮಾರಾಟವಾಗಿತ್ತು.
ಡಿ.22 ಹಾಗೂ 27ರಂದು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆಗೆ ಮತದಾನ ನಡೆಯಿತು. ಚುನಾವಣೆ ಹಿನ್ನೆಲೆಯಲ್ಲಿ ಪಾರ್ಟಿಗಳ ಆಯೋಜನೆ ಹೆಚ್ಚಿದ್ದರಿಂದ ಮದ್ಯ ಮಾರಾಟದ ಪ್ರಮಾಣ ಹೆಚ್ಚಾಗಿದೆ ಎನ್ನಲಾಗಿದೆ.
ಕೊರೊನಾ ಹರಡುವಿಕೆ ತಡೆಗಟ್ಟಲು ಮಾರ್ಚ್ 24 ರಿಂದ ಮೇ ಮೊದಲ ವಾರದವರೆಗೆ ಮದ್ಯದಂಗಡಿ ಬಂದ್ ಆಗಿದ್ದವು. ನಂತರದಲ್ಲಿ ಪಾರ್ಸಲ್‌ಗೆ ಮಾತ್ರ ಅವಕಾಶ ನೀಡಲಾಗಿತ್ತು. ಈಗ ಮೊದಲಿನಂತೆ ತೆರೆದಿವೆ. ಆದಾಯ ಕುಸಿತ ಸರಿದೂಗಿಸಲು ಸರ್ಕಾರವು ಶೇ 17ರಷ್ಟು ತೆರಿಗೆಯನ್ನು ಹೆಚ್ಚುವರಿಯಾಗಿ ವಿಧಿಸಿದೆ. ಮದ್ಯದ ಬೆಲೆ ಹೆಚ್ಚಾಗಿದ್ದರೂ, ಮಾರಾಟ ಮಾತ್ರ ಕುಸಿದಿಲ್ಲ.
Kshetra Samachara
02/01/2021 12:29 pm