ನವದೆಹಲಿ: ಕೋವಿಡ್-19 ತಪಾಸಣೆ ಹಾಗೂ ಪರೀಕ್ಷೆಗಾಗಿ ದೇಶಾದ್ಯಂತ ಏಕರೂಪ ದರ ನಿಗದಿ ಮಾಡುವುದು ಸೂಕ್ತವೇ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ. ಅಷ್ಟೇ ಅಲ್ಲದೆ ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.
ಪ್ರಸ್ತುತ ದೇಶದ ವಿವಿಧ ರಾಜ್ಯಗಳಲ್ಲಿ ಕೋವಿಡ್ ಟೆಸ್ಟ್‌ಗೆ ಬೇರೆ ಬೇರೆ ದರಗಳಿವೆ. ಕೆಲವು ಭಾಗದಲ್ಲಿ 900 ರೂ. ಪಡೆದರೆ ಇನ್ನೂ ಕೆಲವು ಪ್ರದೇಶದಲ್ಲಿ 2800 ರೂ.ವರೆಗೂ ದರ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಏಕರೂಪ 400 ರೂ. ದರ ನಿಗದಿ ಮಾಡಬೇಕು ಎಂದು ಒತ್ತಾಯಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ಅಂಗೀಕರಿಸಿದೆ.
ಸುಪ್ರೀಂಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ, ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ, ವಿ.ರಾಮಸುಬ್ರಹ್ಮಣ್ಯ ಅವರ ಪೀಠವು, ಕೊರೊನಾ ಚಿಕಿತ್ಸಾ ವೆಚ್ಚ ಕಡಿಮೆ ಮಾಡುವಂತೆ ಒತ್ತಾಯಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ಜತೆಗೆ ಕೊರೊನಾ ಪರೀಕ್ಷಾ ವೆಚ್ಚದಲ್ಲಿ ಕಡಿತ ಮಾಡುವ ಕುರಿತ ಅರ್ಜಿಯನ್ನು ವಿಚಾರಣೆ ನಡೆಸುವುದಾಗಿ ಹೇಳಿದೆ. ಅಷ್ಟೇ ಅಲ್ಲದೆ ಕೇಂದ್ರ ಆರೋಗ್ಯ ಇಲಾಖೆಗೆ ನೋಟಿಸ್ ಜಾರಿ ಮಾಡಿದೆ.
PublicNext
24/11/2020 05:03 pm