ಭಾರತೀಯರ ನಿತ್ಯದ ಆಹಾರಗಳಲ್ಲಿ ಅಕ್ಕಿ ಪ್ರಮುಖ ಧಾನ್ಯ. ಅಕ್ಕಿಯನ್ನು ಬಳಸಿ ನಮ್ಮಲ್ಲಿ ತರಹೇವಾರಿ ಖಾದ್ಯಗಳನ್ನು ಮಾಡ್ತಾರೆ. ಅದ್ರೆ ಅಕ್ಕಿ ಬೊಜ್ಜು ಹೆಚ್ಚಿಸುತ್ತದೆಯಾ? ಎಂಬ ಬಗ್ಗೆ ಕಳೆದ ಎರಡು ದಶಕಗಳಿಂದ ಚರ್ಚೆ ನಡೆಯುತ್ತಲೇ ಇದೆ. ಪೌಷ್ಟಿಕಾಂಶ ತಜ್ಞರು ಈ ಬಗ್ಗೆ ಹಲವಾರು ಅಭಿಪ್ರಾಯಗಳನ್ನು ಹೇಳಿದ್ದಾರೆ.
ಅನ್ನದ ಸೇವನೆಯಿಂದ ತೂಕ ಹೆಚ್ಚಾಗುತ್ತದೆ ಎಂಬ ಭಾವನೆಯಿಂದ ಬೊಜ್ಜಿನ ಸಮಸ್ಯೆ ಇರುವ ಅನೇಕರು ಅನ್ನ ಹಾಗೂ ಅಕ್ಕಿಯಿಂದ ತಯಾರಿಸಿದ ಇತರ ಖಾದ್ಯಗಳ ಸೇವನೆಯನ್ನೇ ನಿಲ್ಲಿಸಿದ್ದಾರೆ. ಇನ್ನು ಕೆಲವರು ವಾರಕ್ಕೆ ಕೆಲವು ಬಾರಿ ಮಾತ್ರ ಅಕ್ಕಿಯ ಖಾದ್ಯ ಸೇವಿಸುತ್ತಾರೆ. ಆದರೆ ಯಾವ ಸಂದರ್ಭ ಅಥವಾ ಸಮಯದಲ್ಲಿ ಅನ್ನ ಸೇವನೆ ಉತ್ತಮ ಎಂಬ ಬಗ್ಗೆ ಗೊಂದಲಗಳು ಮುಂದುವರಿದಿವೆ. ಹೀಗಾಗಿಯೇ ಅನ್ನದ ಸೇವನೆಯ ಕುರಿತು ಕೈಗೊಳ್ಳಲಾದ ಸಂಶೋಧನೆ ಯೊಂದರ ಅಂಶಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ನೀವೂ ಓದಿ ತಿಳಿದುಕೊಳ್ಳಿ.
ಅಧ್ಯಯನಗಳ ಪ್ರಕಾರ ಮಧ್ಯಾಹ್ನದ ಊಟದಲ್ಲಿ ಅನ್ನ ಸೇವಿಸುವುದು ಉತ್ತಮ ಎನ್ನಲಾಗಿದೆ. ಇದಕ್ಕೆ ಎರಡು ಪ್ರಮುಖ ಕಾರಣಗಳಿವೆ. ದಿನದ ಅವಧಿಯಲ್ಲಿ ದೇಹದ ಜೀರ್ಣಶಕ್ತಿ ಸಾಮರ್ಥ್ಯ ಉನ್ನತ ಪ್ರಮಾಣದಲ್ಲಿರುವುದರಿಂದ ಅನ್ನ ಸೇವಿಸಿದರೂ ಅದು ಬೇಗ ಜೀರ್ಣವಾಗುತ್ತದೆ. ಇನ್ನು ಬೆಳಗಿನ ಉಪಹಾರದ ನಂತರ ಮಧ್ಯಾಹ್ನ ಸಾಕಷ್ಟು ಹಸಿವಾಗಿರುತ್ತದೆ. ಈ ಸಮಯದಲ್ಲಿ ಅನ್ನ ಸೇವಿಸಿದಲ್ಲಿ ಮುಂದಿನ 8 ರಿಂದ 10 ಗಂಟೆಗಳ ಕಾಲ ದೇಹಕ್ಕೆ ಬೇಕಾದ ಚೈತನ್ಯ ನೀಡಲು ಸಹಕಾರಿಯಾಗುತ್ತದೆ.
ದಿನದ ಅವಧಿಯಲ್ಲಿ ಸಾಮಾನ್ಯವಾಗಿ ನಾವು ಹೆಚ್ಚು ದೈಹಿಕ ಶ್ರಮದ ಕೆಲಸ ಮಾಡುತ್ತಿರುತ್ತೇವೆ. ಹೀಗಾಗಿ ದೇಹಕ್ಕೆ ಬೇಕಾದ ಶಕ್ತಿಯನ್ನು ಒದಗಿಸಬೇಕಾಗುತ್ತದೆ. ಅನ್ನದಲ್ಲಿರುವ ಕಾರ್ಬೊಹೈಡ್ರೇಟ್‌ಗಳು ದೇಹಕ್ಕೆ ಅಗತ್ಯವಿರುವ ಶಕ್ತಿಯನ್ನು ನೀಡಿ ಉಲ್ಲಾಸದಿಂದಿರುವಂತೆ ಮಾಡುತ್ತವೆ.
ಒಟ್ಟಾರೆಯಾಗಿ ಅಕ್ಕಿಯು ದೇಹದ ಆರೋಗ್ಯಕ್ಕೆ ಉತ್ತಮ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಬಿಳಿ ಅಕ್ಕಿಯ ಅನ್ನ ಹಾಗೂ ಕಂದು ಅಕ್ಕಿಯ ಅನ್ನದಲ್ಲಿ ಒಂದು ಪ್ರಮುಖ ವ್ಯತ್ಯಾಸವಿದೆ. ಅದೆಂದರೆ ಕಂದು ಬಣ್ಣದ ಅಕ್ಕಿಯ ಅನ್ನವು ಜೀರ್ಣವಾಗಲು ಬಿಳಿ ಅಕ್ಕಿಯ ಅನ್ನಕ್ಕಿಂತಲೂ ತುಸು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇಷ್ಟು ಬಿಟ್ಟರೆ ಯಾವುದೇ ರೀತಿಯ ಅಕ್ಕಿ ಸೇವಿಸಿದರೂ ಅಂಥ ಹೇಳಿಕೊಳ್ಳುವಂಥ ವ್ಯತ್ಯಾಸಗಳೇನೂ ಆಗವು. ಆದರೂ ತಾವಿರುವ ಪ್ರದೇಶದಲ್ಲಿ ಬೆಳೆಯುವ ಸ್ಥಳೀಯ ಅಕ್ಕಿಯನ್ನೇ ನಿಯಮಿತವಾಗಿ ಬಳಸುವುದು ಸೂಕ್ತ ಎಂಬುದು ತಜ್ಞರ ಹೇಳಿಕೆಯಾಗಿದೆ.
PublicNext
14/03/2022 03:55 pm