ಭಾರತದಲ್ಲಿ ಸ್ತನ ಕ್ಯಾನ್ಸರ್ ಪೀಡಿತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ.ಪ್ರತಿ 29 ಸೆಕೆಂಡ್ ಗಳಿಗೊಂದರಂತೆ ಭಾರತದಲ್ಲಿ ಹೊಸ ಕೇಸ್ ಗಳು ಪತ್ತೆಯಾಗುತ್ತಿವೆ. ಈ ಮಾರಕ ಖಾಯಿಲೆ ನಿಮ್ಮನ್ನು ಆವರಿಸದಂತೆ ನೀವು ಎಚ್ಚರ ವಹಿಸಬಹುದು. ಆರೋಗ್ಯಕರ ಜೀವನಶೈಲಿ ಮೂಲಕ ಸ್ತನ ಕ್ಯಾನ್ಸರ್ ಅನ್ನು ತಡೆಗಟ್ಟಬಹುದು.
ದೈಹಿಕವಾಗಿ ಸದೃಢರಾಗಿರಿ : ಫಿಟ್ ಆಗಿ ಇರಬೇಕಂದ್ರೆ ಮಹಿಳೆಯರು ಪ್ರತಿ ದಿನ ವ್ಯಾಯಾಮ ಮಾಡಬೇಕು. ದೈಹಿಕವಾಗಿ ನೀವು ಸದೃಢರಾಗಿರುವುದು ಅತ್ಯಂತ ಅವಶ್ಯಕ. ನಿಯಮಿತವಾಗಿ ಜಿಮ್ ಗೆ ಹೋಗಬಹುದು, ಅಥವಾ ಮನೆಯಲ್ಲೇ ವ್ಯಾಯಾಮ ಮಾಡಿ. ದೈಹಿಕ ಚಟುವಟಿಕೆ ಇದ್ರೆ ಕ್ಯಾನ್ಸರ್ ಅಪಾಯ ಶೇ.20ರಷ್ಟು ಕಡಿಮೆಯಾಗುತ್ತದೆ.
ಆರೋಗ್ಯಕರ ಆಹಾರ ಸೇವಿಸಿ : ನಿಯಮಿತವಾದ ವ್ಯಾಯಾಮದ ಜೊತೆಗೆ ಡಯಟ್ ಕೂಡ ಒಳ್ಳೆಯದು. ನಿಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ತಮಪಡಿಸಲು ಸೂಕ್ತ ಆಹಾರ ಸೇವಿಸಿ. ಇದರಿಂದ ಸ್ತನ ಕ್ಯಾನ್ಸರ್ ಬರದಂತೆ ತಡೆಯಬಹುದು. ಗಾಳಿಗೆ ತೆರೆದಿಟ್ಟ ಆಹಾರ ಬೇಡ, ಹಣ್ಣು ಹಾಗೂ ತರಕಾರಿಗಳನ್ನು ಹೆಚ್ಚು ಸೇವಿಸಿ. ಹೆಲ್ತಿ ಡಯಟ್ ಪಾಲಿಸುವ ಮೂಲಕ ದೇಹದ ತೂಕ ಹೆಚ್ಚಾಗದಂತೆ ನೋಡಿಕೊಳ್ಳಿ.
ಸ್ತನ್ಯಪಾನ : ಮಗುವಿಗೆ ಸ್ತನ್ಯಪಾನ ಮಾಡಿಸಿದ್ದರೆ ಅಂಥವರಿಗೆ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆ. ಸ್ತನ್ಯಪಾನ ಮಾಡಿಸುವುದರಿಂದ ದೇಹದಲ್ಲಿರುವ ಈಸ್ಟ್ರೋಜನ್ ಪ್ರಮಾಣ ಕಡಿಮೆಯಾಗುತ್ತದೆ. ದೇಹದ ಅಂದ ಹಾಳಾಗುತ್ತದೆ ಎಂಬ ಕಾರಣಕ್ಕೆ ಮಗುವಿಗೆ ಹಾಲುಣಿಸದೇ ಇರಬೇಡಿ. ಯಾಕಂದ್ರೆ ಸ್ತನ್ಯಪಾನದಿಂದ ನಿಮ್ಮ ದೇಹದಲ್ಲಿ ಕ್ಯಾನ್ಸರ್ ಸೆಲ್ ಗಳು ಬೆಳೆಯದಂತೆ ತಡೆಯಬಹುದು.
ಧೂಮಪಾನ ಮತ್ತು ಮದ್ಯಪಾನ ಮಾಡಬೇಡಿ : ಅತಿಯಾದ ಧೂಮಪಾನ ಮತ್ತು ಮದ್ಯಪಾನ ಸ್ತನ ಕ್ಯಾನ್ಸರ್ ಗೆ ಆಹ್ವಾನ ನೀಡಿದಂತೆ. ಸಂಶೋಧನೆಯಲ್ಲಿ ಇದು ಸಾಬೀತಾಗಿದೆ.
ಹಾರ್ಮೋನ್ ಚಿಕಿತ್ಸೆಗಾಗಿ ವೈದ್ಯರನ್ನು ಭೇಟಿ ಮಾಡಿ : ನೀವು ಹಾರ್ಮೋನ್ ಚಿಕಿತ್ಸೆಗೆ ಒಳಗಾಗಬೇಕೆಂದಿದ್ದರೆ ಸ್ತನ ಕ್ಯಾನ್ಸರ್ ನ ಅಪಾಯ ತಡೆಯಲು ವೈದ್ಯರ ಸಲಹೆ ಪಡೆಯುವುದು ಅತ್ಯವಶ್ಯ. ಹಾರ್ಮೋನ್ ಇರುವ ಮಾತ್ರೆಗಳನ್ನು ದೀರ್ಘಕಾಲ ತೆಗೆದುಕೊಳ್ಳಬೇಡಿ.
ಪೀರಿಯೊಡಿಕ್ ಸ್ಕ್ರೀನಿಂಗ್ ಮಾಡಿಸಿಕೊಳ್ಳಿ : ಕುಟುಂಬದಲ್ಲಿ ಯಾರಿಗಾದ್ರೂ ಸ್ತನ ಕ್ಯಾನ್ಸರ್ ಇದ್ದಲ್ಲಿ ಪೀರಿಯಾಡಿಕ್ ಸ್ಕ್ರೀನಿಂಗ್ ಮಾಡಿಸಿಕೊಳ್ಳಲೇಬೇಕು. 30 ವರ್ಷವಾಗುತ್ತಿದ್ದಂತೆ ಒಮ್ಮೆ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳಿ. ಮ್ಯಾಮ್ಮೊಗ್ರಫಿ ಮತ್ತು ಅಲ್ಟ್ರಾಸೌಂಡ್ ಎಂಬ ಎರಡು ಬಗೆಯ ತಪಾಸಣೆ ಲಭ್ಯವಿದೆ.
PublicNext
04/02/2021 04:53 pm