ಮುಂಬೈ: ಜನರು ಕೇಳುತ್ತಿದ್ದ ಪ್ರಶ್ನೆಗಳಿಗೆ ಹಾಸ್ಯಭರಿತ ಪ್ರತ್ಯುತ್ತರಗಳ ಮೂಲಕ ಸಾರ್ವಜನಿಕರಲ್ಲಿ ಲೈಂಗಿಕ ವಿಷಯಗಳ ಕುರಿತು ಅರಿವು ಮೂಡಿಸುತ್ತಿದ್ದರು ಡಾ. ಮಹೀಂದರ್ ವಾತ್ಸಾ ಇನ್ನಿಲ್ಲ.
ಯಾರಲ್ಲೂ ಹೇಳಲಾಗದ, ಕೇಳಲಾಗದ ಪ್ರಶ್ನೆಗಳಿಗೆ ಇವರಿಂದ ಸಮರ್ಪಕ-ಸಮಂಜಸ ಉತ್ತರ ಸಿಗುತ್ತಿತ್ತು.
ಹಾಗಾಗಿಯೇ ಇವರು ಅದೆಷ್ಟೋ ಮಂದಿಯ ವಿಶ್ವಾಸ ಗಳಿಸುವುದರೊಂದಿಗೆ, ವಿಶ್ವಾಸ ಮೂಡಿಸಿದ್ದರು.
'ಆಸ್ಕ್ ದಿ ಎಕ್ಸ್ ಪರ್ಟ್ ಇನ್ ಮುಂಬೈ ಮಿರರ್' ಎಂಬ ಅಂಕಣದ ಮೂಲಕ ಓದುಗರಿಗೆ ಚಿರಪರಿಚಿತರಾಗಿದ್ದ ಡಾ.ಮಹಿಂದರ್ ವಾತ್ಸಾ(96) ಇನ್ನಿಲ್ಲವಾಗಿದ್ದಾರೆ.
ಸ್ತ್ರೀ-ಪುರುಷರೆನ್ನದೆ ಎಲ್ಲರಿಗೂ ಮುಕ್ತವಾಗಿ ಲೈಂಗಿಕ ಸಮಸ್ಯೆಗಳಿಗೆ, ಗೊಂದಲಗಳಿಗೆ ಉತ್ತರ ನೀಡುತ್ತಿದ್ದ ಇವರು ಇಂದು ಮುಂಬೈನಲ್ಲಿ ಕೊನೆಯುಸಿರೆಳೆದರು.
ಸೆಕ್ಸ್ ಬಗ್ಗೆ ಮಾತನಾಡುವುದೇ ಮುಜುಗರ ಅಥವಾ ಅಪರಾಧ ಎಂಬಂತಿದ್ದ ಸಮಯದಲ್ಲೇ ಇವರು ಅದರ ಬಗ್ಗೆ ಮುಕ್ತವಾಗಿ ಮಾತನಾಡುವಂಥ ವಾತಾವರಣ ಕಲ್ಪಿಸಿದ್ದಲ್ಲದೆ, ಲೈಂಗಿಕ ವಿಷಯಗಳ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಿದ್ದರು.
ಡಾ.ವಾತ್ಸಾ 40 ವರ್ಷಗಳಿಂದ ಡಾ.ಸ್ತ್ರೀರೋಗತಜ್ಞ ಮತ್ತು ಪ್ರಸೂತಿ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದರು.
ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾದ ಸಲಹೆಗಾರರಾಗಿಯೂ ಕಾರ್ಯನಿರ್ವಹಿಸಿದ್ದ ಅವರು ಲೈಂಗಿಕ ತಿಳುವಳಿಕ ಹಾಗೂ ಲೈಂಗಿಕ ಶಿಕ್ಷಣದ ಬಗ್ಗೆ ಹೆಚ್ಚು ಒತ್ತು ನೀಡುತ್ತಿದ್ದರು.
ಇವರಿಂದಾಗಿಯೇ 1974ರಲ್ಲಿ ದೇಶದಲ್ಲೇ ಮೊದಲ ಬಾರಿಗೆ ಲೈಂಗಿಕ ಶಿಕ್ಷಣ ಹಾಗೂ ಸಮಾಲೋಚನಾ ಕೇಂದ್ರವನ್ನು ಸ್ಥಾಪಿಸಿತು.
PublicNext
28/12/2020 06:44 pm