ಹುಬ್ಬಳ್ಳಿ: ಜನರಿಗೆ ಕೊರೊನಾ ಪ್ರತಿಬಂಧಕ ಲಸಿಕೆ ಹಾಕಿಸಲು ಆರೋಗ್ಯಾಧಿಕಾರಿಗಳು ಇನ್ನಿಲ್ಲದ ಪಡಿಪಾಟಲು ಅನುಭವಿಸುವಂತಾಗಿದೆ. ಇದರಿಂದ ಏನೂ ಆಗಲ್ಲ, ನಿರ್ಭೀತಿಯಿಂದ ವ್ಯಾಕ್ಸಿನ್ ಹಾಕಿಸಿಕೊಳ್ಳಿ ಅಂತ ಆರೋಗ್ಯ ಸಿಬ್ಬಂದಿ ಕೈ ಮುಗಿದು ಕೇಳಿಕೊಂಡರೂ ಜನ ಕೇರ್ ಮಾಡ್ತಾ ಇಲ್ಲ. ಅದಕ್ಕೆ ಇಲ್ಲೊಬ್ಬರು ಲಸಿಕೆಗೆ ಏನು ಗ್ಯಾರಂಟಿ ಎಂದು ಪ್ರಶ್ನಿಸಿ ಜಿಲ್ಲಾಧಿಕಾರಿಗಳಿಂದಲೇ ಗ್ಯಾರಂಟಿ ಬರೆಸಿಕೊಂಡು ಸಹಿ ಮಾಡಿಸಿಕೊಂಡಿದ್ದಾರೆ.
ಯೆಸ್...ಮಹಾನಗರ ಪಾಲಿಕೆಯ ಹುಬ್ಬಳ್ಳಿ ಕಚೇರಿಯಲ್ಲಿ ಇಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರ ನೇತೃತ್ವದಲ್ಲಿ ಕೋವಿಡ್ ನಿಯಂತ್ರಣ ಕುರಿತು ತುರ್ತು ಸಭೆ ಹಮ್ಮಿಕೊಳ್ಳಲಾಗಿತ್ತು. ಈ ಸಭೆಯಲ್ಲಿ ಪಾಲ್ಗೊಂಡಿದ್ದ ಆನಂದ್ ಕುಂದಕೂರ ಎಂಬ ವ್ಯಕ್ತಿ, ನಾನು ಲಸಿಕೆ ಹಾಕಿಸಿಕೊಳ್ಳುತ್ತೇನೆ. ನಂತರ ನನಗೇನಾದ್ರೂ ಆದ್ರೆ ಏನು ಗ್ಯಾರಂಟಿ? ಏನೂ ಆಗೋದಿಲ್ಲ ಎಂದು ನನಗೆ ಲಿಖಿತ ರೂಪದಲ್ಲಿ ಬರೆದು ಕೊಡಿ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ತಕ್ಷಣ ಸ್ಪಂದಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, 'ಆಯ್ತು. ನಾನು ಆ ಬಗ್ಗೆ ಗ್ಯಾರಂಟಿ ಬರೆದುಕೊಡ್ತೇನೆ. ನೀವು ಲಸಿಕೆ ಹಾಕಿಸಿಕೊಳ್ಳಿ ಎಂದು ಪತ್ರ ಬರೆದು ಸಹಿ ಹಾಕಿ ಕೊಟ್ಟಿದ್ದಾರೆ. ಹಾಗೂ ಗ್ಯಾರಂಟಿ ಪತ್ರ ಬರೆಸಿಕೊಂಡ ಆನಂದ ಕುಂದನೂರ್ ಗೆ ಜಿಲ್ಲಾಧಿಕಾರಿಗಳೇ ಮುಂದೆ ನಿಂತು ಲಸಿಕೆ ಹಾಕಿಸಿದ್ದಾರೆ.
ಪಾಲಿಕೆ ಆಯುಕ್ತ, ಸುರೇಶ್ ಇಟ್ನಾಳ, ಉಪವಿಭಾಗಾಧಿಕಾರಿ ಡಾ. ಬಿ. ಗೋಪಾಲಕೃಷ್ಣ ಅವರು ಈ ಸಂದರ್ಭಕ್ಕೆ ಸಾಕ್ಷಿಯಾಗಿದ್ದರು.
PublicNext
28/11/2021 06:34 pm