ಹಾಸನ: ಹಾಸನಾಂಬೆ ಜಾತ್ರೆಯನ್ನು ಇನ್ನೂ ವ್ಯವಸ್ಥಿತವಾಗಿ, ಅಚ್ಚುಕಟ್ಟಾಗಿ ಮಾಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ. ನಾಡಿನ ಜನ ಸಮುದಾಯಕ್ಕೆ, ರಾಜ್ಯಕ್ಕೆ, ಭರತ ಖಂಡದಲ್ಲಿ ಶಾಂತಿ ನೆಲೆಸಲಿ ಎಂದು ದೇವಿಯಲ್ಲಿ ಪ್ರಾರ್ಥಿಸಿದ್ದೇನೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.
ಪತ್ನಿ ಕನ್ನಿಕಾ ಪರಮೇಶ್ವರಿ ಅವರೊಂದಿಗೆ ಗುರುವಾರ ಹಾಸನಾಂಬೆಯ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಇಂದು ಐತಿಹಾಸಿಕ ದರ್ಶನ ಭಾಗ್ಯ ನನಗೆ ಹಾಗೂ ನನ್ನ ಶ್ರೀಮತಿಗೆ ದೊರಕಿದ್ದು ಪುಣ್ಯ ಎಂದು ಭಾವಿಸುತ್ತೇನೆ. 4-5 ವರ್ಷಗಳ ಹಿಂದೆ ದೇವಿಯ ದರ್ಶನ ಪಡೆದಿದ್ದೆ ಎಂದರು.
ನಿಗೂಢ ವಿಚಾರದಲ್ಲಿ ತಾಯಿಯನ್ನು ಭಕ್ತಿಯಿಂದ ಪೂಜೆ ಮಾಡುತ್ತೇವೆ. ಮೂರು ವರ್ಷದ ಹಿಂದೆ ಇದ್ದ ಭಕ್ತರ ಸಂಖ್ಯೆ ಇಂದು ಹೆಚ್ಚಿದೆ. ಪ್ರತಿ ದಿನ ಲಕ್ಷಾಂತರ ಮಂದಿ ದರ್ಶನ ಪಡೆಯುತ್ತಿದ್ದಾರೆ. ರಾಜ್ಯವಲ್ಲದೆ, ಪಕ್ಕದ ರಾಜ್ಯದಿಂದಲೂ ಸಹಸ್ರಾರು ಭಕ್ತರು ದರ್ಶನ ಪಡೆಯುತ್ತಿದ್ದಾರೆ ಎಂದರು.
ವಿಶೇಷವಾಗಿ ಮಹಿಳೆಯರು ಮಕ್ಕಳೊಂದಿಗೆ ಸಾಲಿನಲ್ಲಿ ನಿಂತು ದರ್ಶನ ಪಡೆಯುವುದು ನೋಡಿಕೊಂಡು ಬಂದೆ. ಈ ಬಾರಿ 3 ಪಟ್ಟು ಜನರು ಬಂದಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಅಚ್ಚುಕಟ್ಟಾಗಿ ಆಯೋಜನೆ ಮಾಡಿರುವುದಕ್ಕೆ ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸುವೆ. ಡಿಸಿ, ಎಸ್ಪಿ, ಐಜಿ, ಸಂಸದ ಶ್ರೇಯಸ್, ಜನಪ್ರತಿನಿಧಿಗಳು ಸೇರಿ ಉತ್ತಮ ಆಡಳಿತ ವ್ಯವಸ್ಥೆ ಮೂಲಕ ಜನರಿಗೆ ತೊಂದರೆ ಆಗದಂತೆ ನೋಡಿಕೊಂಡಿದ್ದಾರೆ ಎಂದು ಶ್ಲಾಘಿಸಿದರು.
ಸಣ್ಣಪುಟ್ಟ ಘಟನೆ ನಡೆಯುವುದು ಸಹಜ, ನಿಭಾಯಿಸಬೇಕು. ಇನ್ನು ಮೂರು ದರ್ಶನ ಬಾಕಿ ಇದ್ದು, ಸೂಕ್ತ ಬಂದೋಬಸ್ತ್ ಮತ್ತು ಭಕ್ತರಿಗೆ ಅಗತ್ಯ ಸೌಲಭ್ಯ ಒದಗಿಸಲು ಐಜಿಗೆ ಸೂಚನೆ ನೀಡಿದ್ದೇನೆ. ಎಚ್ಚರಿಕೆಯಿಂದ ಜನರಿಗೆ ತೊಂದರೆ ಅಗದಂತೆ ಸೂಕ್ತ ಸೌಲಭ್ಯ ಒದಗಿಸಲು ತಾಕೀತು ಮಾಡಿದ್ದೇನೆ ಎಂದರು.
PublicNext
01/11/2024 12:09 pm