ಬೆಂಗಳೂರು : ಕೃಷಿ ಮಸೂದೆ ವಿರೋಧಿಸಿ ರೈತರು ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ಗಣರಾಜ್ಯೋತ್ಸವ ದಿನವಾಗಿದ್ದು ದೆಹಲಿಯಲ್ಲಿಯಂತೆ ಬೆಂಗಳೂರಿನಲ್ಲೂ ಬೃಹತ್ ಟ್ರಾಕ್ಟರ್ ಮೆರವಣಿಗೆ ಮಾಡುವ ರೈತ ಸಂಘಟನೆಗಳ ಪ್ರಯತ್ನ ಸಫಲಗೊಳ್ಳದಂತೆ ರಾಜ್ಯ ಪೊಲೀಸರು ಎಚ್ಚರ ವಹಿಸಿದ್ದಾರೆ.
ಜನಜೀವನಕ್ಕೆ ತೊಂದರೆ ಆಗುತ್ತದೆಂಬ ಕಾರಣ ನೀಡಿ ಬೆಂಗಳೂರಿನಲ್ಲಿ ಇಂದು ಟ್ರಾಕ್ಟರ್ ಮೆರವಣಿಗೆಯನ್ನು ಪೊಲೀಸರು ನಿಷೇಧಿಸಿದ್ದಾರೆ. ಹೀಗಿದ್ದರು ಸಂಘಟನೆಗಳು ಟ್ರಾಕ್ಟರ್ ಮೆರವಣಿಗೆ ನಡೆಸಿಯೇ ತೀರುತ್ತೇವೆ ಎಂದು ಪಟ್ಟು ಹಿಡಿದು ಬೇರೆ ಬೇರೆ ಮಾರ್ಗೋಪಾಯಗಳನ್ನ ಹುಡುಕಿವೆ. ಇದನ್ನು ತಡೆಯಲು ಪೊಲೀಸರು ಮಾಸ್ಟರ್ ಪ್ಲಾನ್ ಮಾಡಿದ್ದಾರೆ.
ನೈಸ್ ರೋಡ್ ಜಂಕ್ಷನ್ನಿಂದ ಪ್ರಾರಂಭಗೊಂಡು ಗೊರಗುಂಟೆ ಪಾಳ್ಯ, ಯಶವಂತಪುರ, ಮಲ್ಲೇಶ್ವರಂ ಸರ್ಕಲ್ ನ ಮಾರಮ ದೇವಸ್ಥಾನ, ಆನಂದ್ ರಾವ್ ಸರ್ಕಲ್ ಮತ್ತು ಫ್ರೀಡಂ ಪಾರ್ಕ್ವರೆಗೆ ಈ ಮೆರವಣಿಗೆ ಸಾಗಲಿದೆ. ಇದೂ ಸೇರಿ ನಗರದ ಆರು ಕಡೆಗಳಿಂದ ಟ್ರಾಕ್ಟರ್ ಹಾಗೂ ಇತರ ವಾಹನಗಳೊಂದಿಗೆ ರೈತರು ಪರೇಡ್ ಮಾಡಲಿದ್ದಾರೆ. ಬಿಡದಿ ಜಂಕ್ಷನ್, ದೇವನಹಳ್ಳಿ ನಂದಿ ಕ್ರಾಸ್, ಹೊಸಕೋಟೆ ಟೋಲ್ ಜಂಕ್ಷನ್, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ, ಸುಮನಹಳ್ಳಿ ಸರ್ಕಲ್ನಿಂದ ವಿವಿಧ rallyಗಳು ಹೊರಟು ಫ್ರೀಡಂ ಪಾರ್ಕ್ ತಲುಪಲಿವೆ.
ಕೆಂಗೇರಿ ಬಾರ್ಡರ್ ನಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ಧಾರೆ. ನೈಸ್ ರಸ್ತೆ ಜಂಕ್ಷನ್ನಲ್ಲಿ ನೂರಾರು ಪೊಲೀಸರ ನಿಯೋಜನೆಯಾಗಿದೆ. ಹೆಚ್ಚುವರಿಯಾಗಿ ಒಂದು ಕೆಎಸ್ ಆರ್ ಪಿ ತುಕಡಿ ಸಹ ನಿಯೋಜಿಸಲಾಗಿದೆ. ಪಶ್ಚಿಮ ವಿಭಾಗದ ಏಳು ಪೊಲೀಸ್ ಠಾಣೆ ವ್ಯಾಪ್ತಿಯ ಸಿಬ್ಬಂದಿಯಿಂದ ಮೈಸೂರು ರಸ್ತೆಯಲ್ಲಿ ಸರ್ಪಗಾವಲು ಹಾಕಲಾಗಿದೆ.
PublicNext
26/01/2021 09:00 am