ಕನ್ನಡ ಚಿತ್ರರಂಗದಲ್ಲಿ 'ಬೆಳದಿಂಗಳ ಬಾಲೆ' ಎಂದೇ ಗುರುತಿಸಿಕೊಂಡಿರುವ ನಟಿ ಸುಮನ್ ನಗರ್‌ಕರ್. 'ನಿಶ್ಕರ್ಷ', ‘ನಮ್ಮೂರ ಮಂದಾರ ಹೂವೆ’, ‘ಅಮ್ಮಾವ್ರ ಗಂಡ’, ‘ಹೂಮಳೆ’, ‘ಮುಂಗಾರಿನ ಮಿಂಚು’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಸುಮನ್ ನಗರ್‌ಕರ್ ಮಿಂಚಿದವರು. ಇತ್ತೀಚೆಗಷ್ಟೇ ‘ಬಬ್ರೂ' ಎಂಬ ಚಿತ್ರದಲ್ಲಿ ಅಭಿನಯಿಸಿದ್ದ ಸುಮನ್ ನಗರ್‌ಕರ್ ಇದೀಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಪಲ್ ರಿಯಾಲಿಟಿ ಶೋ 'ಇಸ್ಮಾರ್ಟ್ ಜೋಡಿ'ಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಈ ಮೂಲಕ ಸುಮನ್ ನಗರ್‌ಕರ್ ಪ್ರಪ್ರಥಮ ಬಾರಿಗೆ ಕನ್ನಡ ಕಿರುತೆರೆಗೆ ಕಾಲಿಟ್ಟಿದ್ದಾರೆ.
ಸುಮನ್ ನಗರ್‌ಕರ್ ಅವರು ತಮ್ಮ ಪತಿ ಗುರುದೇವ್ ನಾಗರಾಜರನ್ನು ಪರಿಚಯಿಸಿಕೊಟ್ಟಿದ್ದಾರೆ. ಪ್ರೀತಿ, ಮದುವೆ ಮತ್ತು ವಿದೇಶದಲ್ಲಿ ಜೀವನ ಹೇಗಿತ್ತು ಎಂದು ಹಂಚಿಕೊಂಡಿದ್ದಾರೆ.
ನಿರೂಪಕ ಗಣೇಶ್ ಅವರು 'ನಿಮ್ಮದು 22 ವರ್ಷಗಳ ಮದುವೆ ಜೀವನ ಅಲ್ಲ ಸ್ನೇಹ, ಹೇಗಿದೆ ಈ ಜರ್ನಿ?' ಎಂದು ಸುಮನ್ ಅವರಿಗೆ ಪ್ರಶ್ನಿಸುತ್ತಾರೆ. ಈ ವೇಳೆ ಕೆಲ ಹೊತ್ತು ಮೌನಕ್ಕೆ ಜಾರಿದ ಸುಮನ್ ನೋವಿನಿಂದ, 'ಇತ್ತೀಚಿಗೆ ನಮ್ಮ ಜೀವನ ಎಲ್ಲೋ ಹಳ್ಳ ತಲುಪಿ ಬಿಟ್ಟಿತ್ತು. ಕಳೆದ ವರ್ಷ ಅವರು ಭಾರತಕ್ಕೆ ಬಂದರು ನಾನು ವಿದೇಶದಲ್ಲಿ ಇದ್ದೆ. ಅವರು ವಾಪಸ್ ಬರಬೇಕಿತ್ತು ಆದರೆ ತುಂಬಾ ತಿಂಗಳು ಮುಂದೂಡುತ್ತಿದ್ದರು. ಆ ಸಮಯದಲ್ಲಿ ನಮ್ಮ ನಡುವೆ ತುಂಬಾ ಗ್ಯಾಪ್ ಆಯ್ತು. ನಾನು ಅದೆಷ್ಟು ದಿನ ನಿದ್ರೆ ಇಲ್ಲದೆ ರಾತ್ರಿ ಕಳೆದಿರುವೆ ಗೊತ್ತಿಲ್ಲ. ಕಳೆದು ಎರಡು ಮೂರು ವರ್ಷಗಳಲ್ಲಿ ನಾನು ಮೆಚ್ಚಿ ಮದುವೆ ಆದ ಗುರು ಎಲ್ಲೋ ಕಳೆದು ಹೋಗಿದ್ದಾನೆ. ನನಗೆ ನನ್ನ ಆ ಕ್ಲೋಸ್ ಸ್ನೇಹಿತ ಗುರು ಮತ್ತೆ ಬೇಕು' ಎಂದು ಭಾವುಕರಾಗಿ ಕಣ್ಣೀರಿಟ್ಟರು.
ಸೀಕ್ರೆಟ್ ರೂಮಿನಲ್ಲಿ ಕುಳಿತುಕೊಂಡು ಗುರುದೇವ್ ನಾಗರಾಜ್ ಮೌನಿಯಾಗುತ್ತಾರೆ. ಭಾವುಕರಾಗಿ ವೇದಿಕೆ ಮೇಲೆ ಬಂದು ಪತ್ನಿಯನ್ನು ತಬ್ಬಿಕೊಳ್ಳುತ್ತಾರೆ.
ಸುಮನ್ ನಗರ್‌ಕರ್ ಮತ್ತು ಗುರುದೇವ್ ನಾಗರಾಜ್ ಅವರು 2001 ಜನವರಿ 1ರಂದು ಸರಳವಾಗಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದರು.
PublicNext
07/08/2022 02:30 pm