ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: "ಪ್ರಾಧಿಕಾರ ಹಲ್ಲು ಕಿತ್ತ ಹಾವಿನಂತಾಗಿದೆ, ಶಿಫಾರಸ್ಸಿಗಷ್ಟೇ ನಾವು ಸೀಮಿತ"; ನಾಗಾಭರಣ

ವರದಿ: ಸಂತೋಷ ಬಡಕಂಬಿ

ಬೆಳಗಾವಿ: ಕನ್ನಡ ಪ್ರಾಧಿಕಾರದ ಅಧ್ಯಕ್ಷನಾಗಿ ತಾವು ಅಧಿಕಾರ ಸ್ವೀಕಾರ ಮಾಡಿದ ನಂತರ ರಾಜ್ಯದಲ್ಲಿ ಕನ್ನಡವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಹತ್ತು ಹಲವು ಬದಲಾವಣೆಗಳನ್ನು ಕೈಗೊಂಡಿದ್ದೇನೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಸಿನಿ ನಿರ್ದೇಶಕ ಟಿ.ಎಸ್.ನಾಗಾಭರಣ ಹೇಳಿದರು.

ಬೆಳಗಾವಿ ಜಿಲ್ಲೆಯಲ್ಲಿ ಕನ್ನಡ ಅನುಷ್ಠಾನ ಕುರಿತ ಪರಿಶೀಲನೆ ಕುರಿತು ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಧಿಕಾರ ತನ್ನ ಕಾರ್ಯ ಮಾಡುತ್ತಿದೆ. ಆದರೆ, ಕಾರ್ಯರೂಪಕ್ಕೆ ತರಲು ಸರ್ಕಾರ ಹಿಂದೇಟು ಹಾಕುತ್ತಿದೆ. ಪ್ರಾಧಿಕಾರಕ್ಕೆ ಕೇವಲ ಶಿಫಾರಸ್ಸು ಮಾಡುವ ಅಧಿಕಾರವಿದೆ. ರಾಜ್ಯದ ಸೂಕ್ಷ್ಮ ಪ್ರದೇಶ ಬೆಳಗಾವಿ ಜಿಲ್ಲೆಯಲ್ಲೂ ಕನ್ನಡವನ್ನು ಎಲ್ಲ ಇಲಾಖೆಗಳಲ್ಲಿ ಅನುಷ್ಠಾನಕ್ಕೆ ತರಲು ಅಧಿಕಾರಿಗಳು ಮುಂದಾಗಬೇಕೆಂದರು.

ಕನ್ನಡ ಚಿತ್ರರಂಗದ ಕಲಾವಿದರು ಕನ್ನಡ ಭಾಷೆ ಕುರಿತು ಅಸಡ್ಡೆ ಮನೋಭಾವ ಹಾಗೂ ಚಿತ್ರರಂಗದಲ್ಲಿ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ. ಹೀಗಾಗಿ ಚಿತ್ರರಂಗದವರು ಕನ್ನಡಪರ ಕಾರ್ಯಗಳಿಂದ ದೂರ ಉಳಿಯುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡ ಭಾಷಾ ಪ್ರಯೋಗಾಲಯ ಸೇರಿದಂತೆ ಅನೇಕ ರೀತಿಯ ಕನ್ನಡ ಪರ ಕೆಲಸಗಳನ್ನು ನಾವು ಮಾಡಿಕೊಂಡು ಬರುತ್ತಿದ್ದೇವೆ ಎಂದ ಅವರು, ಬೆಳಗಾವಿ ತಾಲೂಕಿನ ಉಚಗಾಂವ ಗ್ರಾಮದಲ್ಲಿ ತೆರವುಗೊಳಿಸಲಾಗಿರುವ ಕನ್ನಡ ನಾಮಫಲಕ ತಕ್ಷಣ ಅಳವಡಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.

ಅಲ್ಲದೆ, ಕನ್ನಡವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಎಲ್ಲಾ ಇಲಾಖೆಗಳು ಮುಂದಾಗಬೇಕಾಗಿದೆ. ಒಂದು ವೇಳೆ ಹಿಂದೇಟು ಹಾಕಿದರೆ ಶಿಸ್ತು ಕ್ರಮಕ್ಕೆ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಹೇಳಿದರು.

Edited By :
PublicNext

PublicNext

19/07/2022 08:10 am

Cinque Terre

65.66 K

Cinque Terre

0