ಚಿತ್ರದುರ್ಗ : ಕೇಂದ್ರ ಲೋಕಸೇವಾ ಆಯೋಗದ (UPSC) ಪರೀಕ್ಷೆಯಲ್ಲಿ 707 ನೇ ರ್‍ಯಾಂಕ್ ಪಡೆಯುವ ಮೂಲಕ ಜಿಲ್ಲೆಯ ಯುವತಿಯೊಬ್ಬಳು ಕೀರ್ತಿ ತಂದಿದ್ದಾರೆ. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ದೇವಪುರ ಬೋವಿಹಟ್ಟಿ ಗ್ರಾಮದ ಯುವತಿ ಜಿ ಮಮತಾ ತೇರ್ಗಡೆ ಹೊಂದಿದ್ದಾರೆ.
ಈ ಸಂಬಂಧ ಸುದ್ದಿಗಾರರ ಜೊತೆ ಸಂತಸ ಹಂಚಿಕೊಂಡಿದ್ದಾರೆ. ಭೋವಿಹಟ್ಟಿ ಗ್ರಾಮದ ಗೋವಿಂದಪ್ಪ ಹಾಗೂ ಚಂದ್ರಮ್ಮ ದಂಪತಿಯ ಪುತ್ರಿ ಜಿ. ಮಮತಾ ಪ್ರಾಥಮಿಕ ಶಿಕ್ಷಣವನ್ನು ದೇವಪುರ ಗ್ರಾಮದಲ್ಲಿ ಪೂರೈಸಿ, ಶಿವಮೊಗ್ಗದಲ್ಲಿ ಪಿಯುಸಿ ಓದಿ ಬಳಿಕ ಬೆಂಗಳೂರಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಶಿಕ್ಷಣ ಮುಗಿಸಿದ್ದಾರೆ. ಬಳಿಕ ಬೆಂಗಳೂರಿನಲ್ಲೇ ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ನಡೆಸಿ ತೇರ್ಗಡೆ ಆಗಿರುವುದು ಸಂತಸ ತಂದಿದೆ. ನನ್ನ ಸಾಧನೆಗೆ ಪೋಷಕರು ಹಾಗೂ ಮಾರ್ಗದರ್ಶಕರ ಬೆಂಬಲ ಕಾರಣ. ಚಿಕ್ಕಂದಿನಿಂದಲೂ ಓದಿನಲ್ಲಿ ಆಸಕ್ತಿಯನ್ನ ನಮ್ಮ ತಂದೆ ತಾಯಿ ಬೆಳೆಸಿದರು. ಪರಿಣಾಮ ಇಂಥದೊಂದು ಸಾಧನೆಗೆ ಮುನ್ನುಡಿ ಆಯಿತು ಎನ್ನುತ್ತಾರೆ ಮಮತಾ.
ಯಾರೇ ಯುಪಿಎಸ್‌ಸಿ ಪರೀಕ್ಷೆ ತೇರ್ಗಡೆ ಆಗಬೇಕೆಂದರೆ ಮೊದಲು ಸಿದ್ಧತೆ, ಪರಿಶ್ರಮದ ಜೊತೆಗೆ ಯುಪಿಎಸ್‌ಸಿ ಡಿಮ್ಯಾಂಡ್ಅನ್ನು ಅರ್ಥಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದ್ದಾರೆ. ಸಿಕ್ಕ ಅವಕಾಶವನ್ನು ಸದುಪಯೋಗ ಮಾಡಿಕೊಂಡು ಉತ್ತಮವಾಗಿ ಕಾರ್ಯನಿರ್ವಹಿಸಬೇಕೆಂಬ ಹಂಬಲ ಇದೆ ಅಂತಾರೆ ಮಮತಾ. ಇನ್ನು ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ಮಮತಾ ಅವರನ್ನು ಹೊಸದುರ್ಗ ಶಾಸಕ ಗೂಳಿಹಟ್ಟಿ .ಡಿ. ಶೇಖರ್ ಅಭಿನಂದಿಸಿದ್ದಾರೆ.
PublicNext
25/09/2021 12:16 pm