ಚಿತ್ರದುರ್ಗ: ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ. ಫಲಿತಾಂಶ ಹೊರಬಿದ್ದಿದ್ದು ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದ ವಾಸವಿ ಇಂಗ್ಲಿಷ್ ಶಾಲೆಯ ವಿದ್ಯಾರ್ಥಿನಿ ಮುಕ್ತ ಬಿ.ಎಂ. ಇವರು 625 ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಹಾಗೂ ಜಿಲ್ಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಕರೋನಾ ಏಳುಬೀಳುಗಳ ನಡುವೆಯೂ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲಾಯಿತು. ಭಯದ ನಡುವೆಯೂ ವಿದ್ಯಾರ್ಥಿನಿಗಳು ಪರೀಕ್ಷೆ ಬರೆದಿದ್ದರು.
ಇತ್ತ ಮುಕ್ತ ಎಡೆಬಿಡದೆ ಅಂದಿನ ಪಾಠವನ್ನು ಅಂದೇ ಓದುವ ಹಾಗೂ ಬರೆಯುವ ಮೂಲಕ ಸಾಧನೆ ಮಾಡಿದ್ದಾರೆ. ಮುಕ್ತ ಅವರ ತಂದೆ ತಾಯಿ ಇಬ್ಬರೂ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿನಿ ಮುಕ್ತ ಅವರಿಗೆ ಹುಟ್ಟಿನಿಂದಲೇ ಕಣ್ಣಿನ ಸಮಸ್ಯೆ ಇದೆ. ಶಿಕ್ಷಕರು ಕಪ್ಪು ಹಲಗೆಯ ಮೇಲೆ ಬರೆದ ಅಕ್ಷರಗಳು ಕಾಣುವುದಿಲ್ಲ. ಪಕ್ಕದ ವಿದ್ಯಾರ್ಥಿಗಳಿಂದ ತಿಳಿದುಕೊಳ್ಳುತ್ತಾಳೆ. ಇಂತಹ ಸಮಸ್ಯೆಯ ಮಧ್ಯೆ ಮುಕ್ತ ಸಾಧನೆ ಮಾಡಿರುವುದು ವಿಶೇಷವಾಗಿದೆ.
ಮತ್ತೊಂದು ಕಡೆ ಹಿರಿಯೂರು ನಗರದ ರಾಷ್ಟ್ರೀಯ ಅಕಾಡೆಮಿ ಶಾಲೆಯ ವಿದ್ಯಾರ್ಥಿ ಭರತ್ ಯು. ಎಂಬ ವಿದ್ಯಾರ್ಥಿ 625 ಕ್ಕೆ 625 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಮೊದಲ ಸ್ಥಾನದಲ್ಲಿದ್ದಾನೆ. ವಿದ್ಯಾರ್ಥಿನಿ ಮುಕ್ತ ಹಾಗೂ ಭರತ್ ಇವರ ಸಾಧನೆಗೆ ಶಿಕ್ಷಕರು, ಪೋಷಕರು, ಬಿ.ಇಓ ಸೇರಿದಂತೆ ಮತ್ತಿತರರು ಅಭಿನಂದಿಸಿದ್ದಾರೆ.
PublicNext
10/08/2021 11:21 am