ತುಮಕೂರು: ಶಿಕ್ಷಕಿಯರ ನಡುವೆ ಮನಸ್ತಾಪ ಉಂಟಾಗಿ ಪರಸ್ಪರ ಜಗಳವಾಡಿದ್ದರಿಂದ ಬೇಸತ್ತ ವಿದ್ಯಾರ್ಥಿಗಳ ಪೋಷಕರು ಹಾಗೂ ಗ್ರಾಮಸ್ಥರು ಶಾಲೆಗೆ ಬೀಗ ಜಡಿದ ಘಟನೆ ತಾಲ್ಲೂಕಿನ ಚಿಕ್ಕಸಾರಂಗಿ ಗ್ರಾಮದಲ್ಲಿ ನಡೆದಿದೆ.
ತಾಲ್ಲೂಕಿನ ಗೂಳೂರು ಹೋಬಳಿ ಚಿಕ್ಕಸಾರಂಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಇಬ್ಬರು ಶಿಕ್ಷಕಿಯರು ಪರಸ್ಪರ ಕಿತ್ತಾಡಿರುವುದು ಶಿಕ್ಷಕ ಸಮುದಾಯ ತಲೆತಗ್ಗಿಸುವಂತೆ ಮಾಡಿದೆ.
ಮಕ್ಕಳಿಗೆ ತಿದ್ದಿ ಬುದ್ಧಿ ಕಲಿಸುವ ಗುರುಗಳೇ ವಿದ್ಯಾರ್ಥಿಗಳ ಎದುರಲ್ಲಿ ಪರಸ್ಪರ ನಿಂದಿಸಿಕೊಳ್ಳುತ್ತಾ ಜಗಳವಾಡಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಚಿಕ್ಕಸಾರಂಗಿ ಗ್ರಾಮದ ಶಾಲೆಯಲ್ಲಿ ಪ್ರತಿದಿನವೂ ಶಿಕ್ಷಕಿಯರ ನಡುವೆ ಒಂದಿಲ್ಲೊಂದು ಕಾರಣಕ್ಕೆ ಜಗಳ ನಡೆಯುತ್ತಿರುತ್ತದೆ ಎಂಬ ಮಾತುಗಳು ಗ್ರಾಮಸ್ಥರಿಂದಲೇ ಕೇಳಿ ಬಂದಿವೆ.
ಪ್ರತಿದಿನವೂ ಶಾಲೆಗೆ ತಡವಾಗಿ ಬರುವ ಶಿಕ್ಷಕಿಯರಾದ ಗಂಗಲಕ್ಷ್ಮಮ್ಮ ಹಾಗೂ ಭಾಗ್ಯಮ್ಮ ಎಂಬುವರ ನಡುವೆ ಮನಸ್ತಾಪ ಉಂಟಾಗಿದ್ದು, ಶನಿವಾರ ಬೆಳಿಗ್ಗೆ ತರಗತಿಗಳ ಇದ್ದ ಕಾರಣ ಶಾಲೆಗೆ ತಡವಾಗಿ ಬಂದಿದ್ದಾರೆ. ಆ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಪರಸ್ಪರ ನಿಂದನೆಗೆ ಇಳಿದಿದ್ದಾರೆ. ಇದನ್ನು ಗಮನಿಸಿದ ಗ್ರಾಮಸ್ಥರು ಶಾಲೆ ಬಳಿಗೆ ಬಂದು ವಿಚಾರಿಸಿದಾಗ ಈ ಇಬ್ಬರು ಶಿಕ್ಷಕಿಯರ ಜಗಳ ಬೆಳಕಿಗೆ ಬಂದಿದೆ.
ಗ್ರಾಮಸ್ಥರು ಎದುರಲ್ಲೇ ಈ ಶಿಕ್ಷಕಿಯರು ಪರಸ್ಪರ ನಿಂದನೆಗೆ ಇಳಿದಿದ್ದರಿಂದ ಬೇಸತ್ತ ಗ್ರಾಮಸ್ಥರು ಮಕ್ಕಳನ್ನು ತರಗತಿಗಳಿಂದ ಹೊರಗೆ ಕಳುಹಿಸಿ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದರು.
ನಂತರ ಕ್ಷೇತ್ರ ಶಿಕ್ಷಣಾಧಿಕಾರಿ ಗಳಿಗೆ ದೂರವಾಣಿ ಕರೆ ಮಾಡಿ ಶಿಕ್ಷಕಿಯರ ಜಗಳದ ವಿಚಾರ ತಿಳಿಸಿದ್ದಾರೆ. ಈ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಹನುಮನಾಯಕ್ ಅವರು ಮಕ್ಕಳ ಎದುರಲ್ಲೇ ಜಗಳಕ್ಕೆ ಇಳಿದಿದ್ದ ಶಿಕ್ಷಕಿಯರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿ, ಇನ್ನುಂದೆ ಈ ರೀತಿಯಾಗದಂತೆ ಕ್ರಮ ವಹಿಸುವುದಾಗಿ ತಿಳಿಸಿ, ಸೋಮವಾರದಿಂದ ಸರಿಯಾಗಿ ಕರ್ತವ್ಯ ನಿರ್ವಹಿಸುವಂತೆ ತಾಕೀತು ಮಾಡಿದ್ದಾರೆ.
ಶಿಕ್ಷಕಿಯರ ಗಲಾಟೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
PublicNext
17/07/2022 08:34 am