ನಟ ಶರಣ್ ನಟನೆಯ ಬಹುನಿರೀಕ್ಷಿತ ಗುರು ಶಿಷ್ಯರು ಸಿನಿಮಾದ ಟ್ರೈಲರ್ ಲಾಂಚ್ ನಗರದ ಪೂಜಾ ಇಂಟರ್ ನ್ಯಾಷನಲ್ ಹೋಟೆಲ್ ನಲ್ಲಿ ನಡೆಯಿತು. ಸೆ. 23ರಂದು ರಾಜ್ಯಾದ್ಯಂತ ಸಿನಿಮಾ ತೆರೆ ಕಾಣಲಿದ್ದು, ಚಿತ್ರದ ಪ್ರಮೋಷನ್ ಗೆ ಚಿತ್ರ ತಂಡ ಬೆಣ್ಣೆನಗರಿಗೆ ಆಗಮಿಸಿ, ಪ್ರಚಾರ ನಡೆಸಿತು.
ಈ ವೇಳೆ ಮಾತನಾಡಿದ ಶರಣ್, ನನ್ನ ಪ್ರೊಡಕ್ಷನ್ ನ ಮೂರನೇ ಸಿನಿಮಾ. ತರುಣ್ ಕಿಶೋರ್ ಸುಧೀರ್ ಸಂಸ್ಥೆ ನಿರ್ಮಾಣ ಜವಾಬ್ದಾರಿ ಹೊತ್ತಿದೆ. ಆತನ ಹೊಸ ಬ್ಯಾನರ್ ಶುರುವಾಗುತ್ತಿದೆ. ಬಹಳ ಮೊದಲುಗಳಿಗೆ ಈ ಸಿನಿಮಾ ಕಾರಣವಾಗಿದೆ. ಖೋ ಖೋ ಕ್ರೀಡೆಯ ಮೇಲೆ ನಿರ್ಮಾಣ ಮಾಡಲಾಗಿರುವ ಕನ್ನಡದ ಮೊಟ್ಟ ಮೊದಲ ಸಿನಿಮಾ ಎನ್ನುವುದು ವಿಶೇಷ ಎಂದರು.
ನಮ್ಮ ನೆಲದ, ಸಂಸ್ಕೃತಿ ಬಿಂಬಿಸುವ ಆಟ. ಆದ್ರೆ, ಈ ಕ್ರೀಡೆಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ ಎಂಬ ಬೇಸರ ಇದೆ. ಗುರುಶಿಷ್ಯರು ಸಿನಿಮಾದಲ್ಲಿ ಈ ಆಟದ ಬಗ್ಗೆ ಉತ್ತಮವಾಗಿ ಚಿತ್ರೀಕರಿಸಲಾಗಿದೆ. ಗುರುಗಳ ಕುರಿತಾದ ಹಾಡು ಎಲ್ಲರ ಮನಮುಟ್ಟಿದೆ. ಗುರುಗಳ ಕಣ್ಣಲ್ಲಿ ನೀರು ತರಿಸಿದೆ. ಯಾರೇ ಆಗಲಿ ಗುರುಗಳ ಮಾರ್ಗದರ್ಶನದಲ್ಲಿಯೇ ಎತ್ತರಕ್ಕೆ ಬೆಳೆದಿರುವುದು ಎಂಬುದರಲ್ಲಿ ಎರಡು ಮಾತಿಲ್ಲ. ಅಷ್ಟೊಂದು ಚೆನ್ನಾಗಿ ಮೂಡಿ ಬಂದಿದೆ ಎಂದು ಹೇಳಿದರು.
PublicNext
16/09/2022 08:14 pm