ಲಖನೌ: ರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ಭವ್ಯ ಹಾಗೂ ದಿವ್ಯ ದೀಪೋತ್ಸವ ಇಂದು ಶುಕ್ರವಾರ ನಡೆಯಲಿದೆ.
ದೀಪಾವಳಿ ಪ್ರಯುಕ್ತ 5 ಲಕ್ಷ 57 ಸಾವಿರ ದೀಪಗಳಿಂದ ರಾಮನ ಹುಟ್ಟೂರು ಜಗಮಗಿಸಲಿದೆ.
ಅಯೋಧ್ಯೆ ತೀರ್ಪಿನ ಬಳಿಕದ ಮೊದಲ ದೀಪೋತ್ಸವ ಆಗಿರುವುದರಿಂದ ಇಡೀ ದೇಶದ ಗಮನ ಉತ್ತರ ಪ್ರದೇಶದತ್ತ ಹೊರಳಿದೆ.
ಇನ್ನು ಇಂದು ವಿಶೇಷವಾಗಿ ಸರಯೂ ನದಿಗೆ ಅತ್ಯದ್ಭುತ ಆರತಿ ಕಾರ್ಯಕ್ರಮ ನಡೆಯಲಿದೆ.
ಸದ್ಯ ಅಯೋಧ್ಯೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು , ಇಲ್ಲಿನ ಜನರ ಸಂಭ್ರಮ ಮುಗಿಲು ಮುಟ್ಟಿದೆ.
ಅಯೋಧ್ಯೆಯ ಬೀದಿ ಬೀದಿಗಳು ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.
ಕೊರೊನಾ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರದಂತೆ ಸರಕಾರ ಮನವಿ ಮಾಡಿದ್ದರೂ ಕೂಡ ಈಗಾಗಲೇ ಲಕ್ಷ ಸಂಖ್ಯೆಯಲ್ಲಿ ದೇಶದ ಮೂಲೆ ಮೂಲೆಯಿಂದ ಭಕ್ತರು ಆಗಮಿಸಿದ್ದಾರೆ.
ಶುಕ್ರವಾರದ ಕಾರ್ಯಕ್ರಮಗಳೇನು?
ಭಗವಾನ್ ರಾಮನ ಜೀವನವನ್ನು ಆಧರಿಸಿದ ಹನ್ನೊಂದು ರಥಗಳು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಸಾಕೇತ್ ಕಾಲೇಜಿನಿಂದ ಹೊರಡಲಿದೆ. ಈ ರಥಗಳು ಶ್ರೀರಾಮಚಂದ್ರನ ಜೀವನವನ್ನು ಆಧರಿಸಿದ ವಿವಿಧ ರೀತಿಯ ಪ್ರದರ್ಶನಗಳನ್ನು ನೀಡಲಿದೆ.
ಸಾಕೇತ್ ಕಾಲೇಜಿನಿಂದ ನಯಾ ಘಾಟ್ ರಾಮ್ ಕಿ ಪೌದಿ( ರಾಮ ಜನ್ಮಸ್ಥಳ) ವರೆಗೆ ತೆರಳಲಿದೆ.
ಇಂದು ಮಧ್ಯಾಹ್ನ ಮೂರು ಗಂಟೆಗೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅಯೋಧ್ಯೆ ತಲುಪಲಿದ್ದು, ಮೊದಲು ರಾಮ ಲಲ್ಲಾನ ದರ್ಶನ ಪಡೆಯಲಿದ್ದಾರೆ.
ನಂತರ ಅಲ್ಲಿ ದೀಪ ಬೆಳಗುವ ಮೂಲಕ ದಿಪೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.
PublicNext
13/11/2020 09:35 am