ಗುಜರಾತ್ : ನಾನ್ ವೆಜ್ ಊಟ ಮಾಡಲು ಹೋಟೆಲ್‌ಗೆ ಬಂದ ಗ್ರಾಹಕರಿಗೆ ಗೋಮಾಂಸ ಬಡಿಸಿದ ಆರೋಪದಡಿ ಹೋಟೆಲ್ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ. ರೆಸ್ಟೋರೆಂಟ್ ಮಾಲೀಕನ ಈ ಕೃತ್ಯದ ಬಗ್ಗೆ ತಿಳಿದ ಹಿಂದೂ ಸಂಘಟನೆಗಳು ಪೊಲೀಸರಿಗೆ ಮಾಲೀಕನ ವಿರುದ್ಧ ದೂರು ನೀಡಿದ್ದಾರೆ.
ಬಳಿಕ ರೆಸ್ಟೋರೆಂಟ್ ಮೇಲೆ ದಾಳಿ ನಡೆಸಿದ ಪೊಲೀಸರು ಫ್ರಿಡ್ಜ್‌ನಲ್ಲಿದ್ದ 60 ಕೆಜಿ ಗೋಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಸೂರತ್‍ನ ಲಾಲ್‍ಗೇಟ್ ಪೊಲೀಸ್ ಠಾಣೆಯಲ್ಲಿ ರೆಸ್ಟೋರೆಂಟ್ ಮಾಲೀಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದಾರೆ.
ಹೊಡಿಬಂಗ್ಲಾ ಪ್ರದೇಶದಲ್ಲಿರುವ ಈ ನಾನ್‍ವೆಜ್ ರೆಸ್ಟೋರೆಂಟ್‍ನಲ್ಲಿ ಮಾಂಸಾಹಾರ ಹೆಸರಿನಲ್ಲಿ ದನದ ಮಾಂಸ ಬಡಿಸಲಾಗುತ್ತಿದೆ ಎಂದು ಹಿಂದೂ ಸಂಘಟನೆಯ ಮೂವರು ವ್ಯಕ್ತಿಗಳು ಮಾಹಿತಿ ನೀಡಿದ್ದರು. ಈ ವಿಚಾರವಾಗಿ ತನಿಖೆ ಆರಂಭಿಸಿ ದೃಢಪಡಿಸಿಕೊಂಡು, ಈ ವಿಚಾರವನ್ನು ಲಾಲ್‍ಗೇಟ್ ಪೊಲೀಸ್ ಠಾಣೆಗೆ ತಿಳಿಸಿದ್ದಾರೆ.
ಸೆಪ್ಟೆಂಬರ್ 11 ರಂದು ಪೊಲೀಸರು ಹೋಟೆಲ್ ಮೇಲೆ ದಾಳಿ ನಡೆಸಿ ಫ್ರಿಡ್ಜ್‌ನಲ್ಲಿ 6 ಚೀಲಗಳಲ್ಲಿ ಇರಿಸಲಾಗಿದ್ದ 60 ಕಿಲೋಗ್ರಾಂಗಳಷ್ಟು ದನದ ಮಾಂಸವನ್ನು ವಶಪಡಿಸಿಕೊಂಡರು. ನಂತರ ಪಶುವೈದ್ಯರನ್ನು ಸ್ಥಳಕ್ಕೆ ಕರೆಸಿ ತಮ್ಮ ಸಮ್ಮುಖದಲ್ಲಿಯೇ ಪರೀಕ್ಷೆಗೆ ಮಾದರಿಗಳನ್ನು ತೆಗೆದುಕೊಂಡು ವಿಧಿ ವೈಜ್ಞಾನಿಕ ಪ್ರಯೋಗಾಲಯಕ್ಕೆ ಪೊಲೀಸರು ಕಳುಹಿಸಿದ್ದಾರೆ.
ಸೆಪ್ಟೆಂಬರ್ 14 ರಂದು ಎಫ್‍ಎಸ್‍ಎಲ್ ವರದಿಯನ್ನು ಸ್ವೀಕರಿಸಿದ ನಂತರ, ಅದು ಗೋಮಾಂಸ ಎಂದು ದೃಢಪಡಿಸಿದ್ದಾರೆ. ಬಳಿಕ ಲಾಲ್‍ಗೇಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ರೆಸ್ಟೋರೆಂಟ್ ಮಾಲೀಕ ಸಫ್ರಾಜ್ ಮೊಹಮ್ಮದ್ ವಜೀರ್ ಖಾನ್ ನನ್ನು ಗುಜರಾತ್ ಪ್ರಾಣಿ ಸಂರಕ್ಷಣಾ ತಿದ್ದುಪಡಿ ಕಾಯ್ದೆಯಡಿ ಬಂಧಿಸಿದ್ದಾರೆ.
PublicNext
17/09/2022 06:15 pm