ಉತ್ತರಪ್ರದೇಶ: ಔರೈಯಾ ಜಿಲ್ಲೆಯ ಪ್ರಾಥಮಿಕ ಶಾಲೆಯೊಂದರಲ್ಲಿ ಶಿಕ್ಷಕರೊಬ್ಬರು ದಲಿತ ವಿದ್ಯಾರ್ಥಿಯನ್ನು ಶೌಚಾಲಯದಲ್ಲಿ ಕೂಡಿ ಹಾಕಿ ಬೀಗ ಹಾಕಿದ್ದ ಘಟನೆ ಬೆಳಕಿಗೆ ಬಂದಿದೆ.
ಔರೈಯಾದ ಪ್ರಾಥಮಿಕ ಶಾಲೆಯಲ್ಲಿ ದಲಿತ ವಿದ್ಯಾರ್ಥಿಯೊಬ್ಬನನ್ನು ಶಿಕ್ಷಕರು ಸುಮಾರು 18 ಗಂಟೆಗಳ ಕಾಲ ಶೌಚಾಲಯದಲ್ಲಿ ಬೀಗ ಹಾಕಿ ಬಂಧಿಸಿದ್ದಾರೆ. ಮರುದಿನ ಶಾಲೆ ತಲುಪಿದ ಶಿಕ್ಷಕರು ಬೀಗ ತೆಗೆದಾಗ ಬಾಲಕ ಹೊರಗೆ ಬಂದಿದ್ದಾನೆ. ಮನೆಗೆ ತಲುಪಿದ ಬಳಿಕ ವಿದ್ಯಾರ್ಥಿ ತನಗಾದ ನೋವಿನ ಘಟನೆಯನ್ನು ಕುಟುಂಬಸ್ಥರಿಗೆ ವಿವರಿಸಿದ್ದಾರೆ.
ಈ ಘಟನೆ ಬಿದುನಾ ತಾಲೂಕಿನ ಪಿಪ್ರೌಲಿ ಶಿವ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಪೂರ್ವ ದೂಜೆ ಗ್ರಾಮದ 11 ವರ್ಷದ ವಿದ್ಯಾರ್ಥಿ ಈ ಶಾಲೆಯಲ್ಲಿ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ಶುಕ್ರವಾರ, ಆಗಸ್ಟ್ 5ರಂದು ತನ್ನ ಮಗ ಶಾಲೆಗೆ ಹೋಗಿದ್ದನು ಮತ್ತು ಶಾಲೆಗೆ ರಜೆ ನೀಡಿದರೂ ಮನೆಗೆ ಹಿಂತಿರುಗಲಿಲ್ಲ ಎಂದು ವಿದ್ಯಾರ್ಥಿಯ ಕುಟುಂಬ ಸದಸ್ಯರು ತಿಳಿಸಿದ್ದಾರೆ.
ರಾತ್ರಿಯಿಡೀ ಊರಿನಲ್ಲಿ ಮತ್ತು ಬಂಧು ಬಳಗದಲ್ಲಿ ವಿಚಾರಿಸಿದರೂ ಮಗನ ಬಗ್ಗೆ ಏನೂ ವಿಷಯ ತಿಳಿಯಲಿಲ್ಲ. ಆಗಸ್ಟ್ 6 ರಂದು ಬೆಳಗ್ಗೆ 8 ಗಂಟೆಗೆ ಶಾಲೆ ತೆರೆಯಲು ಶಿಕ್ಷಕರು ಬಂದರು. ಕೊಠಡಿಗಳ ಜತೆಗೆ ಶೌಚಾಲಯದ ಬೀಗವನ್ನೂ ತೆರೆಯಲಾಗಿತ್ತು. ಈ ವೇಳೆ, ಮಗ ಶೌಚಾಲಯದಿಂದ ಹೊರಗೆ ಬಂದಿದ್ದಾನೆ ಎಂದು ಸಂತ್ರಸ್ತ ಬಾಲಕನ ತಂದೆ ಹೇಳಿದ್ದಾರೆ.
ರಜೆ ಇದ್ದ ಕಾರಣ ನಾನು ಮನೆಗೆ ಬರುತ್ತಿದ್ದೆ. ಆಗ ಶಿಕ್ಷಕ ವಿಜಯ್ ಕುಶ್ವಾಹ ಅವರು ನನ್ನನ್ನು ತಡೆದು ಮಧ್ಯಾಹ್ನ 2 ಗಂಟೆಗೆ ಶೌಚಾಲಯಕ್ಕೆ ತಳ್ಳಿದರು ಮತ್ತು ಹೊರಗಿನಿಂದ ಬಾಗಿಲು ಮುಚ್ಚಿದರು. ಆ ಬಳಿಕ ಶೌಚಾಲಯಕ್ಕೂ ಬೀಗ ಹಾಕಲಾಗಿತ್ತು. ಎಲ್ಲರೂ ಹೊರಟು ಹೋಗಿದ್ದರು. ನಾನು ರಾತ್ರಿಯಿಡೀ ಸಹಾಯಕ್ಕಾಗಿ ಕಿರುಚುತ್ತಿದ್ದೆ ಎಂದು ಮಗ ನನ್ನ ಬಳಿ ಹೇಳಿದ್ದಾನೆ. ಶಾಲೆಯ ಬಳಿ ಯಾವುದೇ ಮನೆ ಇಲ್ಲ. ಹೀಗಾಗಿ ಮಗನ ಧ್ವನಿ ಯಾರಿಗೂ ಕೇಳಿಸದೇ 18 ಗಂಟೆಗಳ ಕಾಲ ಶೌಚಗೃಹದಲ್ಲೇ ಇದ್ದ ಎಂದು ತಂದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದಲಿತ ಮಕ್ಕಳೊಂದಿಗೆ ಶಿಕ್ಷಕರ ವರ್ತನೆ ಮತ್ತು ಶಿಕ್ಷಕರ ಅಭ್ಯಾಸ ಸರಿಯಿಲ್ಲ. ಶಾಲೆಯ ಎಲ್ಲ ದಲಿತ ಮಕ್ಕಳೊಂದಿಗೆ ಅವರು ಅನುಚಿತವಾಗಿ ವರ್ತಿಸುತ್ತಾರೆ. ಈ ಘಟನೆ ಬೆಳಕಿಗೆ ಬಂದ ನಂತ್ರ ಗ್ರಾಮದ ಜನರೊಂದಿಗೆ ಶಾಲೆಗೆ ತಲುಪಿದ ಸಂಬಂಧಿಕರು ಪ್ರತಿಭಟನೆ ಮಾಡಲು ಪ್ರಾರಂಭಿಸಿದರು. ಸಂತ್ರಸ್ತ ಕುಟುಂಬದ ಸದಸ್ಯರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಸಿಒ ಮಹೇಂದ್ರ ಪ್ರತಾಪ್ ಸಿಂಗ್ ತಿಳಿಸಿದ್ದಾರೆ. ಶಿಕ್ಷಕನ ವಿರುದ್ಧ ಎಸ್‌ಸಿ-ಎಸ್‌ಟಿ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಶಿಕ್ಷಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
PublicNext
15/08/2022 08:30 pm